ಎಲ್ಲಿದ್ದಾರೆ ಸ್ಪೀಕರ್ ಬೋಪಯ್ಯ: ಕೃಷ್ಣ ಪ್ರಶ್ನೆ
ಮಂಡ್ಯ: ರಾಜ್ಯದ ಉಭಯ ಸದನಗಳ ಉನ್ನತ ಸ್ಥಾನದಲ್ಲಿರುವ ಸ್ಪೀಕರ್ ಎಲ್ಲಿದ್ದಾರೆ ಎಂಬುದು ಗೊತ್ತೆ ಇಲ್ಲ ಎಂಬುದು ಅರ್ಥವಾಗದ ಸಂಗತಿ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸ್ಪೀಕರ್ ಬೋಪಯ್ಯ ಅವರು ಕೂಡಾ ಯಾವುದೊ ಷಡ್ಯಂತ್ರದಲ್ಲಿ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯಪಟ್ಟರು.
ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಅಧ್ಯಕ್ಷರ ಸ್ಥಾನ ರಾಜ್ಯಾಂಗದಲ್ಲಿ ಅತ್ಯಂತ ಗೌರವಯುತವಾದುದ್ದು ಮತ್ತು ಘನತೆಯಿಂದ ಕೂಡಿದೆ. ಈ ಬಗ್ಗೆ ಯಾರು ಮಾತನಾಡುವಂತಿಲ್ಲ. ಪೂರ್ವಯೋಚಿತ ಸಮಯ ನೀಡಿ 13 ಮಂದಿ ಶಾಸಕರು ರಾಜಿನಾಮೆ ನೀಡಲು ಸ್ಪೀಕರ್ ಕಚೇರಿಗೆ ಬಂದಿರಬಹುದು ಅಥವಾ ಬಂದಿರಲಿಕ್ಕು ಇಲ್ಲ. ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ, ವಿಷಯ ಗೊತ್ತಾದ ನಂತರ ಸ್ಪೀಕರ್ ಕಚೇರಿಗೆ ಆಗಮಿಸಿ ಶಾಸಕರಿಂದ ನೇರವಾಗಿ ಅನೇಕ ಪ್ರಶ್ನೆ ಕೇಳಿ ಮನವರಿಕೆ ಮಾಡಿಕೊಂಡು ರಾಜಿನಾಮೆ ಅಂಗೀಕರಿಸಬಹುದಿತ್ತು ಎಂದರು.
ಸ್ಪೀಕರ್ ಅವರು ಎಲ್ಲಿಗೆ ಹೋಗುತ್ತಾರೆ, ಎಲ್ಲಿ ಇರುತ್ತಾರೆ. ಯಾವಾಗ ಬರುತ್ತಾರೆ ಎಂಬ ಎಲ್ಲಾ ಸಂಗತಿಗಳು ಕಚೇರಿ ಅಧಿಕಾರಿಗಳಿಗೆ ಗೊತ್ತಿರಲೇಬೇಕು. ಯಾವುದೇ ಸಂಗತಿ ಗೊತ್ತಿಲ್ಲ ಎಂದರೆ ಅದು ಈಗಿನ ಅನುಕೂಲಸಿಂಧು ರಾಜಕಾರಣದ ಷಡ್ಯಂತ್ರದಲ್ಲಿ ಸಿಲುಕಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಸ್ಪೀಕರ್ ಅವರು ಕಚೇರಿಗೆ ಬಂದು ವಿವರಣೆ ನೀಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂದರು.
ಸ್ಪೀಕರ್ ಬೋಪಯ್ಯ ಅವರು ಈಗಿನ ನಿರ್ಧಾರಗಳು, ತೀರ್ಮಾನಗಳ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ. ಸ್ಪೀಕರ್ ಎಲ್ಲಿಯೂ ಹೋಗಿರಲ್ಲ. ಬರ್ತಾರೆ. ಅಲ್ಲಿಯವರೆಗೂ ಹರಡಿರುವ ವದಂತಿ ನಂಬಿ ಕೆಳದರ್ಜೆಯಲ್ಲಿ ಪ್ರತಿಕ್ರಿಯಿಸುವ ಕೆಲಸವನ್ನು ಯಾರು ಮಾಡಬಾರದು ಎಂದು ಕೃಷ್ಣ ಸಲಹೆ ಮಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.