ಇಂದಿನಿಂದ ಪುಣ್ಯಾರಾಧನೆ
ಮಂಡ್ಯ: ಚುಂಚನಗಿರಿ ಕ್ಷೇತ್ರವನ್ನು ಚಿನ್ನದಗಿರಿಯನ್ನಾಗಿ ಮಾಡಿ ಪ್ರಖ್ಯಾತಿಗೊಳಿಸಿದ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಾರಾಧನಾ ಮಹೋತ್ಸವ ಜ. 28, 29ರಂದು ನಡೆಯಲಿದೆ.
ಕ್ಷೇತ್ರದಲ್ಲಿ ಜ. 28ರಂದು ಬೆಳಗ್ಗೆ 10 ಗಂಟೆಗೆ ಶಿವಾರಾಧನೆ ಮತ್ತು ಶ್ರೀಗಳ ಸಮಾಧಿ ಸ್ಥಳ ಪೂಜಿಸುವ ಮೂಲಕ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ನೂತನ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಚಾಲನೆ ನೀಡಲಿದ್ದಾರೆ.
ಕ್ಷೇತ್ರದ ಕ್ರೀಡಾಂಗಣದಲ್ಲಿ ಮಹೋತ್ಸವಕ್ಕಾಗಿ ಸಿದ್ಧವಾಗಿರುವ ಬೃಹತ್ ವೇದಿಕೆಯಲ್ಲಿ ಸಹಸ್ರಾರು ಭಕ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಪುಣ್ಯಾರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನ ಜಾವ 5 ಗಂಟೆಗೆ ಕಾಲಭೈರವೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಲಾಗುವುದು. ನಂತರ 7 ಗಂಟೆಯಿಂದ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಪೂಜಾ ಕಾರ್ಯಗಳು ಮುಂದುವರಿಯಲಿವೆ.
ಸಂತಸಂಗಮ: ಬೆಳಗ್ಗೆ 9.30ರಿಂದ ಪೂಜಾ ಕಾರ್ಯ ಶ್ರದ್ಧಾಂಜಲಿಯೊಂದಿಗೆ ಸಂತರ ಸಮಾಗಮ ನಡೆಯಲಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಠಾಧೀಶರು, ಸಂತ ಮಹಾತ್ಮರು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಸಂತ ಸಂಗಮವಾಗಲಿದೆ. ರವಿಶಂಕರ್ ಗುರೂಜಿ, ಬಾಬಾ ರಾಮದೇವ, ಪೇಜಾವರ ಶ್ರೀಗಳು, ಸುತ್ತೂರು ಮಠಾಧೀಶರು, ಸ್ವಾಮಿ ನಾರಾಯಣ, ನಾಥ ಸಂಪ್ರದಾಯದ ಆದಿತ್ಯಾನಂದನಾಥ ಸ್ವಾಮಿ, ವಿಶ್ವೇಶಾನಂದ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ.
ಜ.29ರ ಮಂಗಳವಾರ ಭಕ್ತ ಸಂಗಮ ಕಾರ್ಯಕ್ರಮದಲ್ಲಿ ಧೀಮಂತ ನಾಯಕರು, ಕೇಂದ್ರ ಮಂತ್ರಿಗಳು, ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಕಲಾವಿದರು ಪುಣ್ಯಸ್ಮರಣೆಯಲ್ಲಿ ಭಾಗವಹಿಸಲಿದ್ದಾರೆ. ದೇಶ- ವಿದೇಶ, ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಮಹೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.