ಹಾಲಿಗೆ ಹೋದ ಮಾನ ಹಸು ಕೊಟ್ಟರೂ ಬಾರದು!
ಮಂಡ್ಯ: ಹೈನೋದ್ಯಮವು ಸಂಕಷ್ಟದ ಜೇಡರ ಬಲೆಯಲ್ಲಿ ಸಿಲುಕಿದೆ. ಹಸು ಸಾಕಿಕೊಂಡಿರೋ ಸಾಕು, ನೆಮ್ಮದಿಯಿಂದ ಬದುಕುತ್ತಿಯಾ ಎಂದು ಹೇಳುತ್ತಿದ್ದವರು, ಈಗ ದೇವರಾಣೆಗೂ ಹೇಳುತ್ತೇನೆ ಹಸು ಮಾತ್ರ ಸಾಕಬೇಡ ಎನ್ನುವ ಮನಸ್ಥಿತಿಗೆ ಬಂದಿದ್ದಾರೆ.
ಆದರೆ, ಈಗ ಕಾಲ ಬದಲಾಗಿದೆ. ಕಳೆದ ಮಾರ್ಚ್ ನಿಂದ ಜುಲೈ ತನಕ ಹೈನೋದ್ಯಮಕ್ಕೆ ಇದ್ದ ಗ್ರಹಣ ಸಂಪೂರ್ಣವಾಗಿ ಬಿಟ್ಟಿದೆ. ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರದ ಕೆಲ ದಿಟ್ಟ ಕ್ರಮಗಳು ಹಾಲು ಉತ್ಪಾದಕ ಹಾಗೂ ಹಾಲು ಒಕ್ಕೂಟಗಳ ಪುನಶ್ಚೇತನಕ್ಕೆ ನೆರವಾಗಿರುವುದರಿಂದ ರೈತರು ನಿರಾತಂಕವಾಗಿರಬಹುದು.
ಇಷ್ಟಾದರೂ ಈಗಲೂ ಹಾಲು ಉತ್ಪಾದಕರಿಗೆ ಸಕಾಲಕ್ಕೆ ಹಣ ಪಾವತಿಯಾಗುತ್ತಿಲ್ಲ. ರೈತರ ಪಾಲಿಗೆ ಹಾಲು ಅಮೃತವಾಗಿಲ್ಲ, ಬದಲಿಗೆ ಹಾಲಾಹಲವಾಗಿದೆ ಎನ್ನುವ ಮಾತುಗಳು ಇದ್ದೇ ಇವೆ. ರಾಜ್ಯ ಸರ್ಕಾರ ಹಾಲಿಗೆ ಹುಳಿ ಹಿಂಡದೆ ರೈತರನ್ನು ಸಂರಕ್ಷಣೆ ಮಾಡಲು ಕೈಗೊಂಡ ಕ್ರಮಗಳು ಸಾಕಷ್ಟು ಪೂರಕವಾಗಿವೆ. ವರದಾನವೂ ಆಗಿವೆ. ಸರ್ಕಾರದ ನೆರವಿನಿಂದಾಗಿ ರೈತರ ಬದುಕಿನ ಕಾರ್ಗತ್ತಲಿಗೆ ಹೈನೋದ್ಯಮದ ಹಾಲು, ಬೆಳದಿಂಗಳ ರೂಪದಲ್ಲೇ ಬಂದು ದಾರಿ ತೋರಿಸಿದೆ ಎನ್ನುತ್ತಾರೆ ಮಂಡ್ಯ ಹಾಲು ಒಕ್ಕೂಟದ ಅಧಿಕಾರಿಗಳು.
ಮಂಡ್ಯದಲ್ಲಿ ಹಾಲು ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಜಿಲ್ಲೆಯಲ್ಲಿರುವ 4 ಸಾವಿರಕ್ಕೂ ಅಧಿಕ ಹಳ್ಳಿಗಳ ಪೈಕಿ ಶೇ. 70 ಹಳ್ಳಿಗಳಲ್ಲಿ ಹೈನುಗಾರಿಕೆ ಆರ್ಥಿಕ ಮೂಲಾಧಾರಗಿದೆ. ರೈತರಿಗೆ ಬೆನ್ನಲುಬಾಗಿ ನಿಂತಿರುವ ಮಂಡ್ಯ ಹಾಲು ಒಕ್ಕೂಟ ಕಳೆದ ಎರಡು ದಶಕಗಳಲ್ಲಿ ಬೃಹತ್ ಆಗಿ ಬೆಳೆದು ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ.
2000 ನೇ ಇಸ್ವಿಯಿಂದ ಈಚೆಗೆ ಜಿಲ್ಲೆಯು ಸಾಕಷ್ಟು ಬರ, ಮಳೆ ಕೊರತೆಯಂತಹ ಪ್ರಕೃತಿದತ್ತ ಸಮಸ್ಯೆಗಳು ರೈತರನ್ನು ಕಾಡಿದ ಸಂದರ್ಭದಲ್ಲೂ ಹೈನುಗಾರಿಕೆ ರೈತರು ಬದುಕಿಗೆ ಭರವಸೆ ಮೂಡಿಸಿತು. ರೈತರು ಅಥವಾ ರೈತ ಮಹಿಳೆಯರು ಪ್ರತಿ ನಿತ್ಯ ಬೆಳಗ್ಗೆ ಸಂಜೆ ಎರಡು ಗಂಟೆಗಳ ಕಾಲ ಹಸು ಅಥವಾ ಎಮ್ಮೆಯ ಸೇವೆ ಮಾಡಿ, ಸ್ಥಳೀಯವಾಗಿರುವ ಸಂಘಗಳಿಗೆ ಹಾಲು ಹಾಕಿ ಬಂದರೆ ವಾರದ ಬಟವಾಡೆಗೆ ಕಾಯುವುದು ಒಂದು ಬಾಕಿ. ನಿತ್ಯ ಬದುಕಿನ ಬೇಡಿಕೆ ಅಗತ್ಯವಾಗಿರುವಷ್ಟು ಹಣ ಹಾಲಿನಿಂದಲೇ ಸಿಗುವುದರಿಂದ ಅನೇಕ ರೈತರ ಕುಟುಂಬಗಳಿಗೆ ಹಾಲಿನ ಡೈರಿಗಳೇ ಕಾಮಧೇನು.
ಸಂಕಷ್ಟ ಕಾಲ: ಕಳೆದ ವರ್ಷ ಜನವರಿಯಿಂದ ಹಾಲು ಉತ್ಪಾದಕರು ಮತ್ತು ಡೈರಿಗಳು ಸಂಕಷ್ಟದ ಸುಳಿಗೆ ಸಿಕ್ಕಿ ಹಾಕಿಕೊಂಡವು. ಅದರ ಬಿಸಿ ತಟ್ಟಿದ್ದು ಮಾರ್ಚ್ನಲ್ಲಿ. ಡೈರಿ ಉತ್ಪನ್ನಗಳ ರಫ್ತು ಮಾರಾಟಕ್ಕೆ ಕಡಿವಾಣ ಬೀಳುತ್ತಿದ್ದಂತೆ ಅದು ನೇರವಾಗಿ ಒಕ್ಕೂಟಗಳ ಮೇಲೆ ಪರಿಣಾಮ ಬೀರಿತು. ಇದರಿಂದ ರೈತರೂ ಕಂಗಾಲಾದರು. ಹಾಲು ಉತ್ಪಾದನೆ ಹೆಚ್ಚಾಯಿತು. ಖರೀದಿದಾರರ ಸಂಖ್ಯೆ ಕಡಿಮೆ ಆಯಿತು. ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಸೀಮಿತ ಅವಕಾಶ. ರಫ್ತು ಸಂಪೂರ್ಣ ನಿಷೇಧಿಸಿದ್ದರಿಂದ ಮಾತೃ ಡೈರಿ ಕೆಎಂಎಫ್ ಕೂಡ ತತ್ತರಿಸುವ ಹಂತಕ್ಕೆ ಬಂದು ನಿಂತಿತು. ಕೊನೆಗೆ ಗ್ರಾಮಗಳಲ್ಲಿರುವ ಸಂಘಗಳು ಇದರ ಪರಿಣಾಮ ಎದುರಿಸುವ ಅನಿವಾರ್ಯತೆ ಬಂತು. ಅದು ಹಾಲು ಉತ್ಪಾದಕರಿಗೂ ತಾಗಿತು.
ಅಸಮಾಧಾನ: ಜಿಲ್ಲೆಯಲ್ಲಿ ಮಂಡ್ಯ ಹಾಲು ಒಕ್ಕೂಟ (ಗೆಜ್ಜಲಗೆರೆ) ಸೇರಿದಂತೆ ನಾಲ್ಕೈದು ಖಾಸಗಿ ಡೈರಿಗಳು ಹಾಲಿನ ವ್ಯಾಪಾರ ಮಾಡುತ್ತವೆ. ಖಾಸಗಿ ಡೈರಿಯವರಿಗೆ ಲಾಭ ಒಂದೇ ಮುಖ್ಯ. ಲಾಭ ಬರುತ್ತದೆ ಎನ್ನುವುದರೆ ಮಾತ್ರ ಹಾಲಿನ ಶೇಖರಣೆ, ಮಾರಾಟ ಮಾಡುತ್ತಾರೆ. ಉದ್ಯಮ ಸಂಕಷ್ಟಕ್ಕೆ ಸಿಲುಕಬಹುದು ಎಂಬ ಸುಳಿವು ಸಿಕ್ಕ ಕೂಡಲೇ ಡೈರಿಗೆ ದೊಡ್ಡ ಬೀಗ ಜಡಿದು, ದೂರ ಸರಿದು ಮಾರುಕಟ್ಟೆಯ ಹಣೆಬರಹ ಲೆಕ್ಕ ಹಾಕುತ್ತಾರೆ ಹೊರತು, ತಮ್ಮ ಡೈರಿ ನಂಬಿ ಹಾಲು ಹಾಕುವ ಉತ್ಪಾದಕನ ಸ್ಥಿತಿ- ಗತಿ ಬಗ್ಗೆ ಚಿಂತಿಸುವ ಗೋಜಿಗೆ ಹೋಗುವುದಿಲ್ಲ ಎಂಬುದು ಖಾಸಗಿ ಡೈರಿಗಳ ಬಗ್ಗೆ ರೈತರಿಗೆ ಇರುವ ಸಾಮಾನ್ಯ ಅಸಮಾಧಾನ.
ಬಾಡಿಗೆ ತಾಯಿ... ಈ ಕಾರಣಕ್ಕಾಗಿಯೇ ಕೆಎಂಎಫ್ನ ಅಂಗ ಸಂಸ್ಥೆ ಮಂಡ್ಯ ಹಾಲು ಒಕ್ಕೂಟಕ್ಕೂ ಜಿಲ್ಲೆಯಲ್ಲಿರುವ ಇತರೆ ಖಾಸಗಿ ಹಾಲಿನ ಡೈರಿಗಳಿಗೆ ಇರುವ ವ್ಯತ್ಯಾಸಗಳನ್ನು ರೈತರು ಬಹಳ ಮಾರ್ಮಿಕವಾಗಿ ಖಾಸಗಿ ಡೈರಿ ಮತ್ತು ಒಕ್ಕೂಟವನ್ನು ಸ್ವಂತ ತಾಯಿ, ಬಾಡಿಗೆ ತಾಯಿಗೆ ಹೋಲಿಕೆ ಮಾಡಿ ಬಣ್ಣಿಸುತ್ತಾರೆ. ಖಾಸಗಿ ಡೈರಿ ಕಡಿಮೆ ಗುಣಮಟ್ಟದ ಹಾಲನ್ನು ಕೊಟ್ಟರೂ ಪಡೆಯುತ್ತಾರೆ. ನಿರ್ದಿಷ್ಟವಾಗಿ ಹಣ ಪಾವತಿ ಮಾಡುತ್ತಾರೆ. ಆದರೆ, ಸರ್ಕಾರಿ ಸ್ವಾಮ್ಯದ ಮಂಡ್ಯ ಹಾಲು ಒಕ್ಕೂಟ ಗುಣಮಟ್ಟದಲ್ಲಿ ರಾಜಿ ಇಲ್ಲ. ಹಣ ಪಾವತಿಗೆ ಕನಿಷ್ಠ ಎರಡು ವಾರ ಕಾಯಬೇಕು. ಏಕೆಂದರೆ ಸರ್ಕಾರ ಹೆಚ್ಚುವರಿಯಾಗಿ ನೀಡುವ ಪ್ರೋತ್ಸಾಹದ ಹಣ ಹಾಗೂ ಪ್ರತಿ ಲೀಟರ್ಗೆ ಡೈರಿಯಿಂದ ನೀಡಲಾಗುವ 17 ಸೇರಿ ಕನಿಷ್ಠ 19 ಅಥವಾ 20 ಗಳಾಗುತ್ತದೆ. ಇದು ರೈತರಿಗೆ ನೇರವಾಗಿ ಲಭ್ಯವಾಗುತ್ತದೆ. ಸರ್ಕಾರದಿಂದ ಸಬ್ಸಿಡಿ ಹಣ ತಡವಾಗಿ ಬರುತ್ತದೆ. ಇದನ್ನು ಕಾಯುವ ವ್ಯವಧಾನ ಕೆಲವು ರೈತರಿಗೆ ಇರುವುದಿಲ್ಲ.
ಹೈನೋದ್ಯಮದಲ್ಲಿ ಸಮಸ್ಯೆಗಳು ಇದ್ದೇ ಇವೆ. ಆದರೂ ರೈತರ ಬದುಕಿನ ಜೀವನಾಡಿಯಾಗಿರುವ ಹೈನುಗಾರಿಕೆಗೆ ಪುನಶ್ಚೇತನ ಮಾಡುವ ಕ್ರಮಗಳಲ್ಲಿ ಸರ್ಕಾರ ರಾಜಿ ಆಗುವ ಮನೋಭಾವ ತೋರದೇ ಹೋದರೆ ದೇಶದ ಬಹುದೊಡ್ಡ ರೈತ ಸಮುದಾಯ ನೆಮ್ಮದಿಯ ನಿಟ್ಟುಸಿರುವ ಬಿಡುತ್ತದೆ ಎಂದು ಭಾವಿಸುವುದರಲ್ಲಿ ಯಾವುದೇ ತಪ್ಪಿಲ್ಲ.
- ಕೆ. ಎನ್. ರವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.