ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಚೆಸ್ಕಾಂ ಮುತ್ತಿಗೆ
ಭಾರತೀನಗರ: ವಿದ್ಯುತ್ ಪೂರೈಕೆ ಆಗ್ರಹಿಸಿ ಬಿದರಹಳ್ಳಿ, ಬಿದರಹೊಸಹಳ್ಳಿ, ಯಲಾದಹಳ್ಳಿ ಸೇರಿದಂತೆ ಇತರೆ ಗ್ರಾಮದ ನೂರಾರು ರೈತರು ಇಲ್ಲಿನ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿದ್ಯುತ್ಅನ್ನು ದಿನಕ್ಕೆ 1 ಅಥವಾ 2 ಗಂಟೆ ಮಾತ್ರ ನೀಡಲಾಗುತ್ತಿದ್ದು, ಅದರಲ್ಲೂ ಯಾವ ಸಮಯದಲ್ಲಿ ನೀಡುತ್ತಾರೆಂಬುದು ಜನರಿಗೆ ತಿಳಿದಿಲ್ಲ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯಲು ನೀರಿಲ್ಲದೆ ಹಾಹಾಕಾರ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲೆಗಳಲ್ಲಿ ನೀರಿಲ್ಲದ ಕಾರಣ ರೈತರು ಬೋರ್ವೆಲ್ನತ್ತ ಮುಖ ಮಾಡಿದರೂ ಕರೆಂಟ್ನ ಅಭಾವದಿಂದಾಗಿ ಬೆಳೆದಿರುವ ಬೆಳೆಗಳು ಒಣಗುತ್ತಿವೆ ಮತ್ತು ದನಕರುಗಳಿಗೂ ನೀರಿಲ್ಲದಂತಾಗಿದೆ ಎಂದು ಕಿಡಿಕಾರಿದರು.
ತ್ರೀಫೇಸ್ ನೀಡುವ ಬದಲು ಸಿಂಗಲ್ಫೇಸ್ ವಿದ್ಯುತ್ ನೀಡುತ್ತಿರುವುದರಿಂದ ಬೋರೆವೆಲ್ನ ಮೋಟಾರುಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಾರತೀನಗರದ ಚಾಮುಡೇಶ್ವರಿ ಸಕ್ಕರೆ ಕಾರ್ಖಾನೆಯವರು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೂ ಈ ಭಾಗದ ಹಳ್ಳಿಗಳಿಗೆ ಪೂರೈಕೆ ಮಾಡದೆ ಬೇರೆ ಕಡೆಗೆ ವರ್ಗಾಯಿಸುತ್ತಿರುವುದು ಸರಿಯಲ್ಲ ಎಂದು ಗುಡುಗಿದರು.
ಇ.ಇ. ರಾಮಲಿಂಗೇಗೌಡ ಮಾತನಾಡಿ, ಕಡಿಮೆ ವಿದ್ಯುತ್ ಪೂರೈಕೆಯಾಗುತ್ತಿರುವುದರಿಂದ ಎಲ್ಲಾ ಹಳ್ಳಿಗಳಿಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.
ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದಲ್ಲಿ ಭಾರತೀನಗರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಜನರು ಚೆಸ್ಕಾಂ ಕಚೇರಿಯ ಮುಂದೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯೆ ಜ್ಯೋತಿನಿಂಗೇಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ವೈ.ಡಿ. ಸಿದ್ದರಾಜು, ಬಿ.ಬಸವೇಗೌಡ, ಮಾಜಿ ಉಪಾಧ್ಯಕ್ಷ ಬಿ.ಎಚ್. ವೆಂಕಟೇಶ್, ವಿಎಸ್ಎಸ್ಬಿಎನ್ ನಿರ್ದೇಶಕ ಸಿದ್ದರಾಜು, ಎಂಪಿಸಿಎಸ್ ಅಧ್ಯಕ್ಷ ಯಲಾದಹಳ್ಳಿ ಸಿದ್ದೇಗೌಡ ಮತ್ತು ಕೂಲಿಕಾರರ ಸಂಘದ ಬಿದರಹಳ್ಳಿ ಹನುಮೇಶ್ ಸೇರಿದಂತೆ ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.