ಆದಿಚುಂಚನಗಿರಿ ಶ್ರೀಗಳ ಪುಣ್ಯಸ್ಮರಣೆ ಪ್ರಯುಕ್ತ 125 ಯುವಕರಿಂದ ರಕ್ತದಾನ
ಮದ್ದೂರು: ಆದಿಚುಂಚನಗಿರಿ ಶ್ರೀಗಳ ಪುಣ್ಯಸ್ಮರಣೆ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಸೋಮನಹಳ್ಳಿ ಎಸ್.ಸಿ. ಮಲ್ಲಯ್ಯ ವಿದ್ಯಾಸಂಸ್ಥೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಮತ್ತು ಉಚಿತ ರಕ್ತಗುಂಪು ವರ್ಗೀಕರಣ ಶಿಬಿರ ನಡೆಯಿತು. ಶಿವಪುರ ಲಯನ್ಸ್ ಸಂಸ್ಥೆ, ಮಂಡ್ಯ ಮಿಮ್ಸ್ ರಕ್ತನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸೋಮನಹಳ್ಳಿ ಹೈಟಾನ್, ಪಾಸ್ಟರ್ಸ್ ಕಾರ್ಖಾನೆ, ಸಿಂಹದಾಸ್, ಅಡಿಗಾಸ್ ಹಾಗೂ ಎಂಪೈರ್ ಹೋಟೆಲ್‌ಗಳ ಕಾರ್ಮಿಕರು, ವಾಯುಪುತ್ರ ಸೇವಾ ಸಂಘದ ಪದಾಧಿಕಾರಿಗಳು ಸೇರಿದಂತೆ ಸುಮಾರು 125 ಯುವಕರು ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಶಿಬಿರಕ್ಕೆ ಚಾಲನೆ ನೀಡಿದ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಯಭಾರಿ ಹೇಮಂತ್‌ಕುಮಾರ್ ಮಾತನಾಡಿ, ಲಯನ್ಸ್ ಸಂಸ್ಥೆ ದಾನಿಗಳ ಮೂಲಕ ಸಂಗ್ರಹ ಮಾಡಿರುವ ರಕ್ತವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರ ಮಾಡುವುದಾಗಿ ಹೇಳಿದರು. ಗ್ರಾಮೀಣ ಭಾಗದ ಕಡು ಬಡವರಿಗಾಗಿ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಲಯನ್ಸ್ ಸಂಸ್ಥೆ ದಾನಿಗಳಿಂದ ರಕ್ತ ಸಂಗ್ರಹಣೆ ಮಾಡುವ ಸ್ಥಳೀಯ ಆಸ್ಪತ್ರೆಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಶಿವಪುರ ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಕಲ್ಪನಾ ಸಿದ್ದರಾಜು, ಕೆಪಿಸಿಸಿ ಸದಸ್ಯ ಎಸ್. ಗುರುಚರಣ್, ತಾಪಂ ಸದಸ್ಯ ಪಿ. ಸಂದರ್ಶ, ಸಂಸ್ಥೆಯ ಜಿಲ್ಲಾ ಹೆಚ್ಚುವರಿ ಖಜಾಂಚಿ ವಿ.ಕೆ. ಜಗದೀಶ್, ವಲಯಾಧ್ಯಕ್ಷ ಎಚ್. ಮಾದೇಗೌಡ, ಪ್ರಾದೇಶಿಕ ಅಧ್ಯಕ್ಷ ಕೆ.ಎಲ್. ರಾಜಶೇಖರ್, ಸಂಸ್ಥೆ ಉಪಾಧ್ಯಕ್ಷ ಆದರ್ಶ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.