ಡಾ. ಬಾಲಗಂಗಾಧರ ಸ್ವಾಮೀಜಿಗೆ ಶ್ರದ್ಧಾ- ಭಕ್ತಿಯ ನಮನ
ಮದ್ದೂರು: ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ಮಂಗಳವಾರ ಆದಿಚುಂಚನಗಿರಿಯ ಶಿವೈಕ್ಯ ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮಿಯವರ ಪುಣ್ಯಾರಾಧನೆಯನ್ನು ಅತ್ಯಂತ ಶ್ರದ್ಧಾ- ಭಕ್ತಿಯಿಂದ ನೆರವೇರಿಸಲಾಯಿತು.
ಗ್ರಾಮದ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ 50 ಮಂದಿ ಜೋಗಿಗಳ ತಂಡ ಗ್ರಾಮಸ್ಥರ ನೆರವಿನಿಂದ ಹೋಮ, ಹವನಾದಿ ನೆರವೇರಿಸುವ ಮೂಲಕ ಆದಿಶ್ರೀಗಳ ಪುಣ್ಯತಿಥಿಯನ್ನು ಭಕ್ತಿಯಿಂದ ಆಚರಿಸಿದರು.
ಡಾ. ಬಾಲಗಂಗಾಧನಾಥ ಶ್ರೀಗಳ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಸಾಂಪ್ರದಾಯಕ ರೀತಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದ ಗ್ರಾಮಸ್ಥರು, ಇಡೀ ಗ್ರಾಮದ ಜನರಿಗೆ ಅನ್ನಸಂತರ್ಪಣೆ ಮಾಡುವುದರೊಂದಿಗೆ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಿದರು.
ಸಭೆಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯರಾದ ನಾಗೇಶ್ ಮತ್ತು ಗಿರೀಶ್, ಧಾರ್ಮಿಕ, ಆರೋಗ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀಗಳು ಚುಂಚನಗಿರಿ ಕ್ಷೇತ್ರವನ್ನು ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ ಎಂದರು.
ಗ್ರಾಪಂ ಸದಸ್ಯ ಆನಂದ, ತಾಪಂ ಮಾಜಿ ಸದಸ್ಯ ಸಿದ್ದಪ್ಪ, ರೈತ ಸಂಘದ ಮುಖಂಡ ಸಿದ್ದರಾಜು, ಮುಖಂಡರಾದ ಮಧು, ಲಿಂಗು, ಪುಟ್ಟಸ್ವಾಮಿ, ಕೆ.ಬಿ.ನಾಗರಾಜು, ಸಿದ್ದಪ್ಪ, ಕೆಂಚೇಗೌಡ ಉಪಸ್ಥಿತರಿದ್ದರು.
ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿಯೂ ಗ್ರಾಮಸ್ಥರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಜನೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಿ.ಅಶೋಕ್, ಮುಖಂಡರಾದ ನರಸಿಂಹೇಗೌಡ, ಚಿಕ್ಕಮರಿಯಪ್ಪ, ಪುಟ್ಟಸ್ವಾಮಿಗೌಡ, ಗ್ರಾಪಂ ಸದಸ್ಯೆ ಲಕ್ಷ್ಮಮ್ಮ, ಉಪಾಧ್ಯಕ್ಷ ವೆಂಕಟೇಶ್, ಸದಸ್ಯರಾದ ದಯಾನಂದ, ಸುಚಲಿತ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.