ಲಾರಿ-ವ್ಯಾನ್ ಡಿಕ್ಕಿ: ಐವರ ದುರ್ಮರಣ
ಮಂಡ್ಯ: ಲಾರಿ ಹಾಗೂ ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿ ಮಂಡ್ಯದ ಮೂವರು ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಗ್ರಾಮದ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಘಟನೆಯಲ್ಲಿ ಮಂಡ್ಯದ ಚಾಮುಂಡೇಶ್ವರಿ ಬಡಾವಣೆಯ ಆರ್.ಕೆ. ಸ್ವೀಟ್ ಮಾಲೀಕ ಸಿ. ರಾಮಕೃಷ್ಣ ಹೆಗಡೆ(48), ಈತನ ಪತ್ನಿ ಚಂದ್ರಮತಿ(45), ಚಾಲಕ ಶ್ರೀನಿವಾಸ್(23) ಹಾಗೂ ಕೊಳ್ಳೇಗಾಲದ ಚಂದ್ರಮತಿ ಅವರ ದೊಡ್ಡಪ್ಪನ ಮಗಳು (ಹೆಸರು ತಿಳಿದು ಬಂದಿಲ್ಲ), ಈಕೆಯ ಪತಿ ಶ್ರೀನಾಥ್ (38) ಎಂಬವರೆ ಮೃತಪಟ್ಟ ದುರ್ದೈವಿಗಳು.
ಶಿವಮೊಗ್ಗ ಜಿಲ್ಲೆಯ ಸಾಗರ ಬಳಿಯ ಬಿಲ್ಲಗೋಡಿ ಗ್ರಾಮದಲ್ಲಿ ರಾಮಕೃಷ್ಣ ಹೆಗಡೆ ಅವರ ಸಂಬಂಧಿಯೊಬ್ಬರು ನಿಧನರಾದ್ದರು. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅರಸೀಕೆರೆ ಕಡೆಯಿಂದ ಗಂಡಸಿ ಮಾರ್ಗವಾಗಿ ಮಾರುತಿ ವ್ಯಾನ್‌ನಲ್ಲಿ ಬರುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಮುಂಬೈಗೆ ಎಳನೀರು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಾಮಕೃಷ್ಣ ಹೆಗಡೆ, ಇವರ ಪತ್ನಿ ಚಂದ್ರಮತಿ ಹಾಗೂ ವ್ಯಾನ್ ಚಾಲಕ ಶ್ರೀನಿವಾಸ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕೊಳ್ಳೇಗಾಲದ ಶ್ರೀನಾಥ್ ಹಾಗೂ ಅವರ ಪತ್ನಿಯನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಪಿ. ಸುರೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.