ವಿವೇಕಾನಂದರ ಸ್ಮಾರಕ ಮೈಸೂರಿಗರ ವಿವೇಕವಾಗಲಿ
ಮೈಸೂರು: ವಿವೇಕಾನಂದರ ಸ್ಮಾರಕ ಮೈಸೂರಿಗರ ವಿವೇಕವಾಗಲಿ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಾನಸ ಹೇಳಿದ್ದಾರೆ.
ನಿರ್ಮಾಣಗೊಂಡು, ಐತಿಹಾಸಿಕ 150ನೇ ಜಯಂತುತ್ಸವಕ್ಕೆ ಉದ್ಘಾಟನೆಗೊಳ್ಳಬೇಕಿದ್ದ ನಗರದ ಮಹತ್ವಾಕಾಂಕ್ಷೆಯ ಸ್ವಾಮಿ ವಿವೇಕಾನಂದ ಸ್ಮಾರಕ ಭವನ ಕೇವಲ ಸಣ್ಣಪುಟ್ಟ ಕಾರಣಕ್ಕೆ ಸ್ಥಗಿತಗೊಂಡಿದೆ. ಇಂದಿಗೂ ಸಹ ನಿರ್ಮಾಣವಾಗಬೇಕೋ, ಬೇಡವೋ ಎಂಬ ಕಾಲಹರಟೆಯಲ್ಲಿ ಕಾಲಕಳೆಯುತ್ತಿರುವುದು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಇತಿಹಾಸಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.
ಇಂತಹ ಸಂದರ್ಭ ಹಿರಿಯ ಸಾಹಿತಿಗಳು ಒಕ್ಕೂರಲಿನಿಂದ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ ಜಿಪಂ ಸದಸ್ಯರು ಸ್ಮಾರಕ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದಿರುವ ಸಂಗತಿಯಿಂದ ಬೇಸರವಾಗಿಲ್ಲ. ಏಕೆಂದರೆ ನಮ್ಮ ರಾಜಕಾರಣಿಗಳಿಂದ ಅದಕ್ಕಿಂತ ಮತ್ತೇನನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಅಲ್ಲಿ ನಡೆಯುತ್ತಿರುವ ಶಾಲೆ ಮತ್ತು ಜ್ಞಾನಬುತ್ತಿ ಶಿಕ್ಷಣ ಸಂಸ್ಥೆಯ ಚಟುವಟಿಕೆ ಬಗ್ಗೆ ಗೌರವವಿದೆ. ಈ ಚಟುವಟಿಕೆ ಸಂಬಂಧಿಸಿದವರು ನಗರದ ಯಾವುದೇ ಸ್ಥಳದಲ್ಲಿ ಬೇಕಾದರೂ ನಡೆಸಬಹುದು. ಮೈಸೂರಿನ ಹೆಮ್ಮೆಯ ವಿವೇಕ ಸ್ಮಾರಕ ಹಾಗೆ ಮಾಡಲು ಸಾಧ್ಯವಿಲ್ಲ. ಸ್ವತಃ ವಿವೇಕಾನಂದರೇ ಕುಳಿತು ಧ್ಯಾನ ಮಾಡಿದ ಎನ್ಟಿಎಂಎಸ್ ಶಾಲಾ ಆವರಣದವಲ್ಲದೆ ಬೇರೆ ಎಲ್ಲಿಯಾದರೂ, ಎಷ್ಟೆ ದೊಡ್ಡದಾಗಿ ಸ್ಮಾರಕ ಸ್ಥಾಪಿಸಿದರೂ ಭಾವನಾತ್ಮಕ ಬಾಂಧವ್ಯ ಬೆಸೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲಿನ ಘನತೆ, ಪಾವಿತ್ರ್ಯತೆ ಬೇರೆಲ್ಲೂ ಅನುಭವಿಸಲು ಸಾಧ್ಯವಿಲ್ಲ. ಇದನ್ನು ನಗರದ ಪ್ರಜ್ಞಾವಂತರೆಲ್ಲರೂ ಯೋಚಿಸಬೇಕು. ಕೇವಲ ವಿರೋಧಕ್ಕಾಗಿ ವಿರೋಧಿಸದೆ, ಸಣ್ಣತನ ಬದಿಗಿಟ್ಟು, ಮೈಸೂರಿನ ಮಹತ್ವಕ್ಕೊಂದು ಗರಿಯಾಗಲಿರುವ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ಒಮ್ಮತದಿಂದ ಬೆಂಬಲಿಸುವ ಮೂಲಕ ನಮ್ಮೊಳಗಿನ ವಿವೇಕ ಜಾಗೃತಗೊಳಿಸೋಣ ಎಂದು ಅವರು ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.