ಹಾಲು ಕುಡಿದಷ್ಟು ಸುಲಭವಲ್ಲ ಹೈನೋದ್ಯಮ
ಮಂಡ್ಯ: ಹೈನುಗಾರಿಕೆ ರೈತರಿಗೆ ಭದ್ರತೆ ಒದಗಿಸುತ್ತದೆ. ಈ ತಳಹದಿಯಲ್ಲೇ ಮಂಡ್ಯ ಹಾಲು ಒಕ್ಕೂಟ ಅಸ್ತಿತ್ವ ಬಂದ ನಂತರ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಈ ಬಗ್ಗೆ ಮಾತೆರಡಿಲ್ಲ. ಹಾಲು ಉತ್ಪಾದನೆ ಹೆಚ್ಚಾದಾಗ ಒಕ್ಕೂಟಕ್ಕೆ ಒಂದೊಂದು ವರ್ಷ ಆರ್ಥಿಕ ಗ್ರಹಣ ತಾಗುತ್ತದೆ. ಇದು ನೇರ ರೈತರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು.
ಹಾಲು ಉತ್ಪಾದನೆ ಕೆಲವೊಮ್ಮೆ ನಿರೀಕ್ಷೆ ಮೀರಿ ಹೆಚ್ಚಾಗುತ್ತದೆ. ಅದೇ ಹಾಲು ಉತ್ಪಾದನೆಯಿಂದ ಉಪ ಉತ್ಪನ್ನಗಳ ರಫ್ತಿಗೆ ಕಡಿವಾಣ ಬಿದ್ದಾಗಲಂತೂ ಒಕ್ಕೂಟ ಸಾಕಷ್ಟು ತಿಣುಕಾಡುತ್ತದೆ. ಆದರೆ, ಖಾಸಗಿ ಡೈರಿಗಳು ಬಾಗಿಲು ಹಾಕಿ ಸೇಫ್ ಆಗಿರುತ್ತವೆ. ಅದೇ ರೀತಿ ಒಕ್ಕೂಟ ಪಲಾಯನ ಮಾಡುವಂತಿಲ್ಲ. ಎಲ್ಲವನ್ನೂ ರೈತರ ಸಮೂಹದಲ್ಲೇ ಇದ್ದುಕೊಂಡು ಎದುರಿಸಬೇಕು ಮತ್ತು ಸಹಿಸಿಕೊಳ್ಳಬೇಕು.
ಸರ್ಕಾರದ ಸಹಾಯ ನೆನೆಯಬೇಕು: ಈಗಿನ ರಾಜ್ಯ ಸರ್ಕಾರ ಯಾವುದೇ ಪಕ್ಷದ್ದೇ ಇರಲಿ. ಈ ಸರ್ಕಾರವು ಒಕ್ಕೂಟಕ್ಕೆ ಮತ್ತು ರೈತರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದನ್ನು ನಾವು ಕೃತಜ್ಞತೆಯಿಂದ ನೆನೆಬೇಕು. ಒಕ್ಕೂಟ ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣಕ್ಕಾಗಿ ನಾವು ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಬೆಲೆಯಲ್ಲಿ ಕಳೆದ ವರ್ಷ ಮೂರೂವರೆ ರು. ಗಳನ್ನು ಕಡಿತ ಮಾಡಿದೆವು. ಇದು ಅನಿವಾರ್ಯವಾಗಿತ್ತು. ಸದ್ಯದಲ್ಲೇ ಮತ್ತೆ ರೈತರಿಗೆ ನೀಡುವ ಹಾಲಿನ ದರವನ್ನು ಹೆಚ್ಚಿಸುವ ಸಂಕಲ್ಪ ಮಾಡಿದ್ದೇವೆ ಎನ್ನುತ್ತಾರೆ ಹರೀಶ್.
ಹಾಲಿನ ಉಪ ಉತ್ಪನ್ನಗಳ ರಫ್ತಿಗೆ ಕಡಿವಾಣ ಹಾಕಿದಾಗ ರಾಜ್ಯ ಸರ್ಕಾರ ನೆರವಿಗೆ ಬಂತು. ಹಾಲಿನ ಪೌಡರ್ಗೆ 185 ಬೆಲೆ ಇತ್ತು. ನಾವು 130 ಗೆ ಮಾರಾಟ ಮಾಡಿದೆವು. ಉಳಿದ ಬಾಕಿ 50 ಗಳಲ್ಲಿ ಸರ್ಕಾರ ಅರ್ಧದಷ್ಟು ಅಂದರೆ 25 ಗಳನ್ನು ಒಕ್ಕೂಟ ನೀಡುತ್ತಾ ಬಂದಿತು. ಇದರ ಜೊತೆಗೆ ರೈತರು ನೀಡುವ ಹಾಲಿಗೆ ಸಬ್ಸಿಡಿ ನೀಡುತ್ತಿದ್ದ ಹಣವನ್ನು ನೀಡುವುದಾಗಿ ಹೇಳಿದೆ ಎಂದರು.
ಒಕ್ಕೂಟವು ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 10 ಕೋಟಿ ಸಾಲ ಪಡೆಯುತ್ತಿದ್ದೇವೆ. ಇದಕ್ಕಾಗಿ ಬ್ಯಾಂಕ್ ಶೇ. 10 ರಷ್ಟು ಬಡ್ಡಿ ವಿಧಿಸುತ್ತದೆ. ಒಕ್ಕೂಟ ಕೇವಲ ಶೇ. 4 ರಷ್ಟು ಬಡ್ಡಿ ಪಾವತಿ ಮಾಡದರೆ ಸರ್ಕಾರ ಉಳಿದ ಶೇ. 6 ರಷ್ಟು ಬಡ್ಡಿ ಮೊತ್ತವನ್ನು ಪಾವತಿಸುವುದಾಗಿ ತಿಳಿಸಿದರು. ಇದೇ ಅಲ್ಲದೆ ಕೆಎಂಎಫ್ 11 ಕೋಟಿ ಹಣ ಸಾಲದ ರೂಪದಲ್ಲಿ ಒಕ್ಕೂಟಕ್ಕೆ ಕೊಡಲು ಮುಂದೆ ಬಂದಿದೆ. ಇದೂ ಸರ್ಕಾರದಿಂದ ಆಗಿರುವ ನೆರವು ಎಂದು ಹೇಳಿದರು.
ರೈತರ ಹಿತರಕ್ಷಣೆಗೆ ಇಷ್ಟೊಂದು ಪ್ರಮಾಣದಲ್ಲಿ ಸರ್ಕಾರ ಎಷ್ಟೆಲ್ಲಾ ಸಹಾಯಧನ ನೀಡುತ್ತಾ ಬಂದರೂ ಹಾಲು ಉತ್ಪಾದಕರಿಗೆ ಮಾತ್ರ ಇನ್ನೂ ಲಾಭ ಸಿಕ್ಕಿಲ್ಲ. ಕೂಡಲೇ ಎಲ್ಲಾ ಸಮಸ್ಯೆ ಪರಿಹರಿಸಿಕೊಂಡು ರೈತರಿಗೆ ನೀಡಬೇಕಾಗಿರುವ 30 ಕೋಟಿ ಬಾಕಿ ಹಣ ಪಾವತಿಸಿದರೆ ಅದಕ್ಕಿಂತ ಸಾರ್ಥಕ ಕೆಲಸ ಮತ್ತೊಂದಿಲ್ಲ ಎನ್ನುವುದು ರೈತ ಸಮುದಾಯದ ಆಶಯ.
-ಕೆ. ಎನ್. ರವಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.