ಸ್ಲಂ ನಿವಾಸಿಗಳ ಸಮಸ್ಯೆಗೆ ಅಂತೂ ಸಿಕ್ತು ಪರಿಹಾರ
ಮಂಡ್ಯ: ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾಳಿಕಾಂಬ ದೇವಸ್ಥಾನದ ಹಿಂಭಾಗದ ಸ್ಲಂ ನಿವಾಸಿಗಳ ವಸತಿ ಸಮಸ್ಯೆಗೆ ಶುಕ್ರವಾರ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು.
ರಾಜ್ಯ ಉಚ್ಛ ನ್ಯಾಯಾಲಯದ ಆದೇಶದಂತೆ ಕಾಳಿಕಾಂಬ ಕೊಳಚೆ ಪ್ರದೇಶದ 22 ಕುಟುಂಬ ವಾಸಿಗಳನ್ನು ಸ್ಥಳಾಂತರಗೊಳಿಸುವ ಬಗ್ಗೆ ಮಾರ್ಚ್ 1 ಕೊನೆ ದಿನವಾಗಿತ್ತು. ಅದರಂತೆ ಫೆ.28 ರಂದು ಜಿಲ್ಲಾಧಿಕಾರಿಗಳು, ಕೊಳಚೆ ಮಂಡಳಿ ಅಧಿಕಾರಿಗಳು, ಸ್ಲಂ ನಿವಾಸಿಗಳ ಒಕ್ಕೂಟದ ಪದಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು.
ಈ ನಿವಾಸಿಗಳನ್ನು ಕಾಳಿಕಾಂಬ ಸ್ಲಂ ಆವರಣದಿಂದ ತೆರವುಗೊಳಿಸದಂತೆ ನಗರದ ಎಲ್ಲಾ ಸ್ಲಂ ನಿವಾಸಿಗಳು ಪಟ್ಟು ಹಿಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತ ಬಂದಾಗ ಪೊಲೀಸರ ನೆರವು ಪಡೆದುಕೊಂಡು ಶುಕ್ರವಾರ ಸ್ಲಂ ನಿವಾಸಿಗಳನ್ನು ತೆರವುಗೊಳಿಸುವ ನಿರ್ಧಾರ ಮಾಡಿದಾಗ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವ ತೀರ್ಮಾನಕ್ಕೆ ಬಂದರು.
ಕಾಳಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಂ.ಕೆ. ರಾಮಲಿಂಗೇಗೌಡ, ಕಾಳಿಕಾಂಬ ಕೊಳಚೆ ಪ್ರದೇಶ ನಿವಾಸಿಗಳ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ, ಕೊಳಚೆ ಮಂಡಳಿ ಅಧಿಕಾರಿ ಎನ್. ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಿಕೊಂಡ ಒಪ್ಪಂದಗಳ ನಿರ್ಣಯಗಳು ಹೀಗಿವೆ.
ಮಂಡ್ಯ ನಗರ ಸರ್ವೇ ನಂ.843 ಮತ್ತು 844ರಲ್ಲಿ ಕಾಳಿಕಾಂಬ ದೇವಸ್ಥಾನದ ಟ್ರಸ್ಟ್ಗೆ ನೀಡಲಾಗಿದ್ದ 28.50 ಗುಂಟೆ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಯಾವುದೇ ಷರತ್ತುಗಳಿಲ್ಲದೇ ಬಿಟ್ಟುಕೊಡಲು ಸೇವಾ ಸಮಿತಿ ಒಪ್ಪಿಕೊಂಡಿದೆ.
ಸೇವಾ ಸಮಿತಿ ದಾನದ ರೂಪದಲ್ಲಿ ನೀಡಲು ಒಪ್ಪಿರುವ 20 ಗುಂಟೆ ಜಾಗದಲ್ಲಿ ಮಂಡಳಿ 'ಜಿ' ಪ್ಲಸ್ ಒನ್ ಮಾದರಿ 42 ಕುಟುಂಬಗಳಿಗೆ ಮನೆ ನಿರ್ಮಿಸುವ ಯೋಜನೆಅನುಷ್ಠಾನಗೊಳಿಸಲು ಒಪ್ಪಿಕೊಳ್ಳಲಾಗಿದೆ.
ಕಾಳಿಕಾಂಬ ಸೇವಾ ಸಮಿತಿಯವರಿಗೆ 8.50 ಗುಂಟೆ ಜಮೀನು ಮಾತ್ರ ಬಿಟ್ಟು ಕೊಡುವುದು, ಉಳಿದ ಭಾಗವನ್ನು ಕೊಳಚೆ ಪ್ರದೇಶ ಎಂದು ಘೋಷಿಸಲು ಪರಸ್ಪರ ಒಪ್ಪಿಗೆ ನೀಡಲಾಗಿದೆ.
ಕೊಳಚೆ ನಿವಾಸಿಗಳ ತೆರವಿಗೆ ಸಂಬಂಧಿಸಿದಂತೆ 2006ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸೇವಾ ಸಮಿತಿ ನೀಡಿದ್ದ ಎಲ್ಲಾ ಮೊಕದ್ದಮೆ ಹಿಂದಕ್ಕೆ ಪಡೆದುಕೊಳ್ಳುವುದು ಮತ್ತು ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥವಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿ ಸೌಹಾರ್ದಯುತವಾಗಿ ನಿವಾಸಿಗಳು, ಕಾಳಿಕಾಂಬ ಸೇವಾ ಸಮಿತಿಯವರು ಮುಂದೆ ಸಮಸ್ಯೆ ಎದುರಾದಲ್ಲಿ ಪರಿಹಾರದ ಮೂಲಕವೇ ಪರಿಹರಿಸಿಕೊಳ್ಳುವುದು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.