ಕುಡಿವ ನೀರು ಯೋಜನೆಗೆ ಚಾಲನೆ
ಹಲಗೂರು: ಇಲ್ಲಿಗೆ ಸಮೀಪದ ಬಾಳೆಹೊನ್ನಿಗೆ ಗ್ರಾಮದಲ್ಲಿ ಪೂರ್ಣಗೊಂಡಿರುವ ಕುಡಿವ ನೀರು ಪೂರೈಸುವ ಕಾರ್ಯಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ಗ್ರಾಮದಲ್ಲಿ ಕೆಲ ತಿಂಗಳಿಂದ ಕುಡಿವ ನೀರಿನ ಸಮಸ್ಯೆ ಇರುವುದನ್ನು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಂತರ ಶಾಸಕರ ನಿಧಿ ಹಾಗೂ ಜಿಪಂನ ಅನುದಾನ ಸೇರಿ ಒಟ್ಟು 10 ಲಕ್ಷ ವೆಚ್ಚದಲ್ಲಿ ನೀರು ಪೂರೈಸುವ ಯೋಜನೆ ರೂಪಿಸಲಾಗಿತ್ತು. ತೊರೆಕಾಡನಹಳ್ಳಿ ಗ್ರಾಮದ ಶಿಂಷಾ ನದಿಯಿಂದ ಚನ್ನಪಟ್ಟಣಕ್ಕೆ ಪೂರೈಕೆ ಆಗುತ್ತಿರುವ ಕಾವೇರಿ ನೀರನ್ನು ವಡ್ಡರ ದೊಡ್ಡಿ ಗ್ರಾಮದಿಂದ ಪೈಪ್ಲೈನ್ ಅಳವಡಿಕೆ ಮೂಲಕ ಬಾಳೆಹೊನ್ನಿಗೆ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕಾರ್ಯ ಪೂರ್ಣಗೊಂಡಿದೆ. ಇದಕ್ಕೆ ಶಾಸಕ ನರೇಂದ್ರ ಸ್ವಾಮಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಭೀಮಾ ಜಲಾಶಯಕ್ಕೆ ಶಿಂಷಾ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಲಿದೆ. ಇದರಿಂದ ಈ ಭಾಗದಲ್ಲಿ ನೀರಿನ ಬವಣೆ ಬಗೆಹರಿಯಲಿದೆ ಎಂದು ಹೇಳಿದರು. ಈ ಸಂದರ್ಭ ತಾಪಂ ಅಧ್ಯಕ್ಷ ಕುಂದೂರು ಪ್ರಕಾಶ್, ಶಿವಕೆಂಚೇಗೌಡ, ಎಚ್.ವಿ. ರಾಜು, ಕೃಷ್ಣ, ಪ್ರಕಾಶ್ ಉಪಸ್ಥಿತರಿದ್ದರು.
ಯುವತಿಗೆ ವಂಚಿಸಿ ಯುವಕ ಪರಾರಿ
ಚನ್ನಪಟ್ಟಣ: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ ಯುವಕ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿ, ನಂತರ ಗರ್ಭಪಾತ ಮಾಡಿಸಿ ಪರಾರಿಯಾಗಿರುವ ಘಟನೆ ಚನ್ನಪಟ್ಟಣದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಮಂಡ್ಯದ ಕಲ್ಲಹಳ್ಳಿಯವನಾದ ಕುಮಾರ ಎಂಬುವನೇ ಈ ದುಷ್ಕೃತ್ಯ ಎಸಗಿದವನು. ಚನ್ನಪಟ್ಟಣದ ಲಾಳಘಟ್ಟ ಗ್ರಾಮದಲ್ಲಿ ಗೂಡ್ಸ್ ಟೆಂಪೋ ಡ್ರೈವರ್ ಆಗಿದ್ದ ಈತ ಯುವತಿಯ ಜತೆ ಸ್ನೇಹ ಬೆಳೆಸಿದ್ದಾನೆ. ನಂತರ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಯುವತಿ ಗರ್ಭಿಣಿಯಾಗಿರುವುದು ತಿಳಿಯುತ್ತಿದ್ದಂತೆ ಎಚ್ಚೆತ್ತ ಕುಮಾರ ಮಂಡ್ಯ ಆಸ್ಪತ್ರೆಯೊಂದರಲ್ಲಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ. ತನ್ನ ಹೀನ ಕೃತ್ಯ ಬಯಲಿಗೆ ಬರುವ ಅಪಾಯ ಅರಿತು ಯುವತಿಯನ್ನು ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ. ಚನ್ನಪಟ್ಟಣ ಠಾಣೆಯಲ್ಲಿ ವಂಚನೆ, ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿ ಕುಮಾರನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.