ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಯಾವ್ದುತಗೊಂಡ್ರಿ... ಸೀರೆನೋ, ಮೂಗುತಿಯೋ!

Parashurama
Updated On : 3 Mar 2013, 11:40 am

ಮಂಡ್ಯ:  ಯಾವುದು ತಗೊಂಡ್ರಿ. ಸೀರೆನೋ, ಮೂಗುತಿಯೋ...
ಹೀಗೆ ಕೇಳುವಂಥ ಪರಿಸ್ಥಿತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಮತದಾರರಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಮಾತಾಗಿದೆ.
ಸಿಂಗಲ್ ವೋಟಿಗೆ 100. ಒಂದೇ ಮನೆಯಲ್ಲಿ ಮಹಿಳೆ ಸೇರಿ ನಾಲ್ಕೈದು ವೋಟ್‌ಗಳಿದ್ದರೆ 500 ಕ್ಯಾಶ್ ಜತೆಗೆ ಸೀರೆ ಅಥವಾ ಮೂಗುತಿ. ಆನಂತರ ವೀಳ್ಯದೆಲೆ ಮೇಲೆ ಆಣೆ ಪ್ರಮಾಣ ಮಾಡಿಸುವಂಥ ಕೆಲಸಗಳು ಮಾಡಲಾಗುತ್ತಿದೆ.
ಕಿರು ಕದನಕ್ಕೆ ಮೂರು ದಿನಗಳಷ್ಟೆ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಮಾ.5ರಂದು ತೆರೆ ಬೀಳಲಿರುವುದರಿಂದ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ಮತದಾರರಿಗೆ ನಾನಾ ಬಗೆಯ ಉಡುಗೊರೆಗಳನ್ನು ನೀಡಿ ತಮ್ಮತ್ತ ಸೆಳೆಯಲು ತಯಾರಿ ನಡೆಸಿರುವ ಅನೇಕ ಅಭ್ಯರ್ಥಿಗಳು, ಆಣೆ ಪ್ರಮಾಣಕ್ಕೂ ಮುಂದಾಗಿದ್ದಾರೆ.
ಅಭ್ಯರ್ಥಿಗಳು ಮತದಾರರಿಗೆ ಹಂಚುವ ಸಲುವಾಗಿಯೇ ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಹೋಲ್‌ಸೇಲ್ ದರದಲ್ಲಿ ಖರೀದಿಸಿರುವ ಸಾವಿರಾರು ಸೀರೆಗಳು, ರವಿಕೆಗಳು, ಮೂಗುತಿಗಳು, ವಾಚ್‌ಗಳು ಈಗಾಗಲೇ ವಾರ್ಡ್‌ಗಳಲ್ಲಿರುವ ತಮ್ಮ ಬೆಂಬಲಿಗರ ಮನೆಯಲ್ಲಿ ಭದ್ರವಾಗಿ ದಾಸ್ತಾನಾಗಿವೆ.
ಚುನಾವಣಾ ವೀಕ್ಷಕರು ಹಾಗೂ ಅಧಿಕಾರಿಗಳು, ಅಭ್ಯರ್ಥಿಗಳ ಮತ್ತು ಅವರ ಬೆಂಬಲಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದರೂ ತೆರೆ ಮರೆಯಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ವಾರ್ಡ್‌ಗಳಲ್ಲಿ ಪುರುಷರ ಬದಲಾಗಿ ಮಹಿಳೆಯರಿಗೆ ಸೀರೆ, ರವಿಕೆ, ಮೂಗುತಿ ಕೊಟ್ಟು ಓಲೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕೆಲವು ವಾರ್ಡ್‌ಗಳಲ್ಲಿನ ಪ್ರಭಾವಿ ವ್ಯಕ್ತಿಗಳನ್ನು ಗುಪ್ತ ಸ್ಥಳಕ್ಕೆ ಕರೆದೊಯ್ದು ಅವರಿಗೆ ಪಾರ್ಟಿ ಹೆಸರಿನಲ್ಲಿ ಗುಂಡುತುಂಡಿನ ಜತೆಗೆ ಉಡುಗೊರೆ ಕೊಡಲಾಗುತ್ತಿದೆ. ಈ ಮೂಲಕ ಆ ಪ್ರಭಾವಿ ವ್ಯಕ್ತಿಯ ಜನಾಂಗದ ಜನರ ಮತಗಳನ್ನು ಕೈ ವಶ ಮಾಡಿಕೊಳ್ಳುವ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ.
ಸ್ತ್ರೀ ಶಕ್ತಿಗಳೇ ಕಿಂಗ್‌ಮೇಕರ್:  ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರೇ ಪ್ರಧಾನ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ ಸ್ತ್ರೀಶಕ್ತಿ ಸಂಘಟನೆಗಳಿಗೂ ಅಭ್ಯರ್ಥಿಗಳು ಆಮಿಷವೊಡ್ಡುವುದನ್ನು ಬಿಟ್ಟಿಲ್ಲ. ಕೆಲ ಮಹಿಳಾ ಸ್ವ ಸಹಾಯ ಸಂಘಗಳು, ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ನಾನಾ ಆಮಿಷಗಳನ್ನು ಒಡ್ಡಿರುವ ಅಭ್ಯರ್ಥಿಗಳು ಅವರನ್ನು ತಮ್ಮೊಂದಿಗೆ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಬಂದರೆ ನಿಮ್ಮ ಸಂಘಟನೆಗೆ ಆರ್ಥಿಕ ನೆರವು ಒದಗಿಸಿಕೊಡುತ್ತೇನೆ. ಅವರೆಲ್ಲರಿಗೂ ನಮಗೇ ಮತ ಹಾಕುವಂತೆ ಮನವೊಲಿಸಿ ಎಂದು ಅಭ್ಯರ್ಥಿಗಳು ಮಹಿಳಾ ಸಂಘಟನೆಗಳ ಸದಸ್ಯರಿಂದ ವೀಳ್ಯದೆಲೆ, ಉಪ್ಪಿನ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅಭ್ಯರ್ಥಿಗಳ ಬೆಂಬಲಿಗರು ಉಡುಗೊರೆಗಳನ್ನು ಮತದಾರನ ಕೈಗೆ ತಲುಪಿಸಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದಾರೆ. ಮತದಾನದ ಹಿಂದಿನ ದಿನ ರಾತ್ರಿ ಹಣ ಹಾಗೂ ಉಡುಗೊರೆಗಳನ್ನು ಮತದಾರನ ಮನೆ ಬಾಗಿಲಿಗೆ ತಲುಪಿಸಲು ಸಹ ಕೆಲ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.
ಇದರ ಜೊತೆಗೆ ವಾರ್ಡ್‌ನ ಕೆಲ ಯುವಕರನ್ನು ನಗರದ ಹೊರವಲಯದ ಡಾಬಾಗಳಿಗೆ ಕರೆದೊಯ್ದು ಗುಂಡು-ತುಂಡಿನ ಪಾರ್ಟಿಗಳನ್ನು ಏರ್ಪಡಿಸುವ ಮೂಲಕ ಅವರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನವನ್ನೂ ಹಲವರು ನಡೆಸಿದ್ದಾರೆ.
ಮಂಡ್ಯದ ಹೊರವಲಯದ ಇಂಡುವಾಳು ಅರಣ್ಯ ಪ್ರದೇಶ ಹಾಗೂ ಶ್ರೀರಂಗಪಟ್ಟಣದ ಗಣಂಗೂರು ಅರಣ್ಯ ಪ್ರದೇಶಗಳಲ್ಲಿ ಭರ್ಜರಿ ಬಾಡೂಟದ ವ್ಯವಸ್ಥೆಯೂ ನಡೆಯುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಂದ ನಗರಸಭೆ ಚುನಾವಣೆ ಕಾವೇರ ತೊಡಗಿದೆ.
ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷೇತರರು ಸರಿಸಮಾನವಾಗಿ ಪೈಪೋಟಿ ನೀಡುತ್ತಿದ್ದಾರೆ. ಗೆಲುವಿಗಾಗಿ ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿರುವ ಅಭ್ಯರ್ಥಿಗಳಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲೆಯುತ್ತಾಳೆ ಎಂಬುದು ಸದ್ಯದ ಕುತೂಹಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments