ಅನಾರೋಗ್ಯ ಹರಡುತ್ತಿರುವ ಮಿಮ್ಸ್!
ಕ.ಪ್ರ.ವಾರ್ತೆ ಮಂಡ್ಯ ಮಾ. 19
ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡಬೇಕಾದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆ ಇದೀಗ ತನ್ನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯವನ್ನೇ ಹದಗೆಡಿಸುವ ಕಾರ್ಯದಲ್ಲಿ ತೊಡಗಿದೆ.
ಮಿಮ್ಸ್ ಆಸ್ಪತ್ರೆಯಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳನ್ನು ಪ್ರತಿನಿತ್ಯ ಆಸ್ಪತ್ರೆ ಆವರಣದಲ್ಲಿಯೇ ದಹನ ಮಾಡಲಾಗುತ್ತಿದೆ. ಇದರಿಂದ ಹೊರ ಬರುತ್ತಿರುವ ವಿಷಾನಿಲ ಹಾಗೂ ಧೂಳಿನ ಕಣಗಳು ಆಸ್ಪತ್ರೆ ಸುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಆಸ್ಪತ್ರೆ ಪಕ್ಕದಲ್ಲಿರುವ ನೆಹರು ಬಡಾವಣೆಯ ನೂರಾರು ನಿವಾಸಿಗಳು, ತ್ಯಾಜ್ಯ ಸುಡುವುದರಿಂದ ಹೊರ ಬರುತ್ತಿರುವ ವಿಷಾನಿಲವನ್ನೇ ಉಸಿರಾಡುವಂತಾಗಿದೆ. ಇದರಿಂದಾಗಿ ಕೆಲ ಜನರು ಗಂಟಲು, ಮೂಗು ಉರಿ, ಮೈ ಕಡಿತ, ಚರ್ಮ ರೋಗ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಆದೇಶ ಉಲ್ಲಂಘನೆ: ಸ್ಥಳೀಯ ನಿವಾಸಿಗಳು ಈಗಾಗಲೇ ಮಿಮ್ಸ್ ವೈದ್ಯಕೀಯ ಅಧೀಕ್ಷಕರಿಗೆ ದೂರು ಸಹ ನೀಡಿದ್ದಾಗಿದೆ. ದೂರಿಗೆ ಸ್ಪಂದಿಸಿದ ವೈದ್ಯಕೀಯ ಅಧೀಕ್ಷಕರು, ತ್ಯಾಜ್ಯ ಸುಡದಂತೆ ಹಾಗೂ ಬೇರೆಡೆಗೆ ವಿಲೇವಾರಿ ಮಾಡುವಂತೆ ಸೂಚಿಸಿದ್ದರೂ ಗುತ್ತಿಗೆ ಪಡೆದ ಏಜೆನ್ಸಿಯವರು, ಆದೇಶ ಉಲ್ಲಂಘಿಸಿ ತ್ಯಾಜ್ಯಗಳನ್ನು ಸುಡುತ್ತಲೇ ಇದ್ದಾರೆ.
ಆಸ್ಪತ್ರೆಯಿಂದ ಪ್ರತಿನಿತ್ಯ ನಾನಾ ಬಗೆಯ ತ್ಯಾಜ್ಯಗಳು ಹೊರ ಬರುತ್ತಿದೆ. ಮಾನವನ ಮೂಳೆಗಳ ತ್ಯಾಜ್ಯ, ರಕ್ತ, ಶರೀರದ ದ್ರವ ಸೇರಿ ನಿತ್ಯ ನೂರಾರು ಕೆಜಿಯಷ್ಟು ಹೊರ ಬರುತ್ತದೆ. ಜತೆಗೆ ಸೂಜಿ, ಸಿರೇಂಜ್ , ಬ್ಲೇಡ್ ಮತ್ತಿತರರ ವಸ್ತುಗಳು ಸಂಗ್ರಹವಾಗುತ್ತಿವೆ.
ಹೀಗೆ ಸಂಗ್ರಹವಾದ ತ್ಯಾಜ್ಯಗಳನ್ನು ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ 15 ದಿನಗಳಾದರೂ ವಿಲೇವಾರಿ ಮಾಡಲಾಗುತ್ತಿಲ್ಲ. ಬಹಳ ದಿನಗಟ್ಟಲೆ ಸಂಗ್ರಹಿಸಿದ ದ್ರವ ಮತ್ತು ಘನ ತ್ಯಾಜ್ಯಗಳನ್ನು ಸಂಗ್ರಹಿಸಿದ ನಂತರ ಅದನ್ನು ಶವಾಗಾರದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ದಹಿಸಲಾಗುತ್ತಿದೆ.
ಮಿಮ್ಸ್ ಆಸ್ಪತ್ರೆ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಂಸ್ಕರಣಾ ಘಟಕಕ್ಕೆ ಸಾಗಿಸದೆ ಆಸ್ಪತ್ರೆ ಆವರಣದಲ್ಲಿಯೇ ಬಿಸಾಡುವ ಮೂಲಕ ಜೈವಿಕ ವೈದ್ಯಕೀಯ ತ್ಯಾಜ್ಯ (ವ್ಯವಸ್ಥಾಪನಾ ಮತ್ತು ನಿರ್ವಹಣೆ) ಕಾಯಿದೆ- 1998ನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ.
ಶಿಕ್ಷೆ, ದಂಡ: ವೈದ್ಯಕೀಯ ವಸ್ತುಗಳನ್ನು ವೈದ್ಯಕೀಯ ಕಾರ್ಯಕ್ಕೆ ಬಳಿಸಿದ ನಂತರ ಆ ವಸ್ತುಗಳಿಗೆ ಶೇ. 1ರಷ್ಟು ಹೈಪೋಕ್ಲಿರೈಟ್ ಸಲ್ಯೂಷನ್ ಬಳಸಿ ನಿಷ್ಕ್ರೀಯಗೊಳಿಸಬೇಕು. ನಂತರ ಆ ವಸ್ತುಗಳನ್ನು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸಬೇಕೆಂಬುದು ಕಾಯಿದೆಯಲ್ಲಿ ಅಡಕವಾಗಿದೆ. ಇದನ್ನು ಉಲ್ಲಂಘಿಸಿದರೆ ಸೆಕ್ಷನ್ 15ರ ಪ್ರಕಾರ ಶಿಕ್ಷೆ ಮತ್ತು ದಂಡ ಕೂಡ ವಿಧಿಸಲಾಗುತ್ತದೆ.
ಇದರ ಅರಿವಿದ್ದರೂ ಆಸ್ಪತ್ರೆ ಆಡಳಿತಾಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ತ್ಯಾಜ್ಯಗಳ ವಿಲೇವಾರಿ ಗುತ್ತಿಗೆ ಪಡೆದಿರುವ ಏಜೆನ್ಸಿಯವರು, ತ್ಯಾಜ್ಯಗಳನ್ನು ಆಸ್ಪತ್ರೆ ಆವರಣದಲ್ಲಿಯೇ ದಹಿಸುತ್ತಿದ್ದಾರೆ. ಇದರ ಪರಿಣಾಮವನ್ನು ಅಕ್ಕಪಕ್ಕದ ನಿವಾಸಿಗಳು ಹಾಗೂ ರಸ್ತೆಯಲ್ಲಿ ತಿರುಗಾಡುವ ಜನರು ಅನುಭವಿಸುತ್ತಿದ್ದಾರೆ.
ಹಾನಿಕಾರಕ: ಆಸ್ಪತ್ರೆಯ ತ್ಯಾಜ್ಯ ವಸ್ತುಗಳು ಹಾನಿಕಾರಕ. ಇವುಗಳ ಸುಡುವಿಕೆಯು ವಿವಾದಾತ್ಮಕ ಪದ್ಧತಿ. ತ್ಯಾಜ್ಯಗಳನ್ನು ಸುಡುವುದರಿಂದ ಉಂಟಾಗುವ ವಿಷಾನಿಲಗಳು ಬಿಡುಗಡೆಯಾಗುವುದರಿಂದ ಧೂಳಿನ ಕಣಗಳು ವಾತಾವರಣವನ್ನು ಕಲುಷಿತಗೊಳಿಸುತ್ತವೆ.
ಈ ಮೊದಲು ಆಸ್ಪತ್ರೆಯ ತ್ಯಾಜ್ಯವನ್ನು ಯತ್ತಗದಹಳ್ಳಿ ಬಳಿಯ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಆಸ್ಪತ್ರೆ ಆವರಣದಲ್ಲಿ ತಾತ್ಕಾಲಿಕವಾಗಿ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಯಾರೊ ಬೀಡಿ- ಸಿಗರೇಟು ಸೇದುವವರು ತ್ಯಾಜ್ಯಕ್ಕೆ ಬೆಂಕಿ ಹಚ್ಚಿರಬೇಕು ಎಂದು ಆಸ್ಪತ್ರೆ ವೈದ್ಯರೊಬ್ಬರು ಕನ್ನಡಪ್ರಭಕ್ಕೆ ಹಾರಿಕೆ ಉತ್ತರ ನೀಡಿದರು.
ತ್ಯಾಜ್ಯ ನಿರ್ವಹಣೆ ಹೇಗೆ?
ಜೈವಿಕ ವೈದ್ಯಕೀಯ ತ್ಯಾಜ್ಯ (ವ್ಯವಸ್ಥಾಪನಾ ಮತ್ತು ನಿರ್ವಹಣೆ) ಕಾಯಿದೆ ಪ್ರಕಾರ ಆಸ್ಪತ್ರೆಗಳು ಪರಿಸರ ಮತ್ತು ಮಾನವನ ಆರೋಗ್ಯಕ್ಕೆ ವಿರುದ್ಧವಾದ ಚಟುವಟಿಕೆ ನಡೆಸುವಂತಿಲ್ಲ. ವೈದ್ಯಕೀಯ ತ್ಯಾಜ್ಯವನ್ನು ಇನ್ನಿತರ ತ್ಯಾಜ್ಯದೊಂದಿಗೆ ಸೇರಿಸುವಂತಿಲ್ಲ. ಪ್ರತ್ಯೇಕ ಬ್ಯಾಗುಗಳಲ್ಲಿ ತ್ಯಾಜ್ಯ ತುಂಬಿ ಸಂಸ್ಕರಣಾ ಘಟಕಕ್ಕೆ ಸಾಗಿಸಬೇಕು.
ಆಸ್ಪತ್ರೆಯ ನಿರ್ದಿಷ್ಟ ಜಾಗದಲ್ಲಿ ಹಳದಿ, ಕೆಂಪು, ನೀಲಿ ಅಥವಾ ಬಿಳಿ, ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲ ಇಡಬೇಕು. ವೈದ್ಯಕೀಯ ಸೇವೆಗೆ ಬಳಸಿದ ತ್ಯಾಜ್ಯವನ್ನು ಈ ಚೀಲಗಳಿಗೆ ಹಾಕಬೇಕು. ಹಳದಿ ಚೀಲಕ್ಕೆ ಮಾನವ ದೇಹದ ಅಂಗಾಂಶ, ಕೆಂಪು ಚೀಲಕ್ಕೆ ಕೆಥೆಟರ್, ಟಬಿಂಗ್ಸ್, ನೀಲಿ ಅಥವಾ ಬಿಳಿ ಚೀಲಕ್ಕೆ ಸೂಜಿಗಳು, ಸಿರೇಂಜ್ಗಳು, ಬ್ಲೇಡ್, ಗಾಜು, ಕಪ್ಪು ಚೀಲಕ್ಕೆ ಡ್ರಗ್ಸ್, ಔಷಧಿ ಹಾಕಿ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಾಗಿಸಬೇಕು. ಈ ವ್ಯವಸ್ಥೆ ಅಳವಡಿಸಿಕೊಳ್ಳದ ಮಿಮ್ಸ್ ಆಸ್ಪತ್ರೆ ಪರಿಸರ ಮತ್ತು ಮಾನವ ಕುಲಕ್ಕೆ ಕಂಟಕ ತಂದೊಡ್ಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.