ಜೆಡಿಎಸ್, ಕಾಂಗ್ರೆಸ್ ಹಣಾಹಣಿಗೆ ವೇದಿಕೆ ಸಜ್ಜು
ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆ ತರುವಾಯ ಕೊಂಚ ನಿರಾಳವಾಗಿದ್ದ ರಾಜಕೀಯ ಪಕ್ಷಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗಳಿಸಿರುವ ಸ್ಥಾನಗಳನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ನಾಯಕರು ಲಾಭ - ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ತಂದುಕೊಟ್ಟಿದೆ. ಇನ್ನು ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಸುವ ಮೂಲಕ ಜೆಡಿಎಸ್ ಸ್ವಲ್ಪ ಹಿನ್ನಡೆ ಕಂಡಿದೆ. ಬಿಜೆಪಿ ಸ್ಥಿತಿಯಂತೂ ಜಿಲ್ಲೆ ಮಟ್ಟಿಗೆ ಶೋಚನೀಯವಾಗಿದೆ.
ಅಲ್ಲಿಗೂ ಇಲ್ಲಿಗೂ ಭಿನ್ನತೆ: ನಗರ ಪ್ರದೇಶದ ಮತದಾರರಿಗೆ ಹೋಲಿಕೆ ಮಾಡಿದರೆ ಹಳ್ಳಿಗಾಡಿನ ಮತದಾರರ ಒಲವು, ಚಿಂತನೆಗಳಲ್ಲಿ ಸಾಕಷ್ಟು ಭಿನ್ನತೆಗಳಿವೆ. ಪೌರ ಸಂಸ್ಥೆ ಚುನಾವಣೆಯಲ್ಲಿ ಶೇಕಡವಾರು ಮತದಾನವನ್ನು ಗಣನೆಗೆ ತೆಗೆದುಕೊಂಡರೆ ಮತದಾರರ ಒಲವು ಹೆಚ್ಚಾಗಿ ಜೆಡಿಎಸ್ ಪರವಾಗಿದೆ. ಹೀಗಾಗಿ ಈ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ರಾಜಕೀಯ ಪಕ್ಷದ ಮುಖಂಡರೊಬ್ಬರು.
ಕಾಂಗ್ರೆಸ್ನಲ್ಲಿ ಉತ್ಸಾಹ: ಪೌರ ಸಂಸ್ಥೆ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಬೀಗುತ್ತಿರುವ ಕಾಂಗ್ರೆಸ್ ಹೊಸ ಉತ್ಸಾಹದಲ್ಲಿದೆ. ಇದನ್ನು ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಕಾಂಗ್ರೆಸ್ ಒಂದೆಡೆ ಲೆಕ್ಕಾಚಾರ ಹಾಕುತ್ತಿದೆ.
ಒಗ್ಗಟ್ಟಿನ ಮಂತ್ರ ಇಲ್ಲ: ಆಂತರಿಕ ಕಲಹ ಹಾಗೂ ಗುಂಪುಗಾರಿಕೆಯಿಂದ ಬೇಸತ್ತಿರುವ ಕಾಂಗ್ರೆಸ್ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ ಕೇಳಿ ಬರುತ್ತಿಲ್ಲ. ಪಕ್ಷದೊಳಗಿನ ನಾಯಕರನ್ನು ಒಗ್ಗೂಡಿಸಲು ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಚುನಾವಣಾ ಸಾರಥ್ಯ ವಹಿಸಿಕೊಳ್ಳುವುದನ್ನು ಎದುರು ನೋಡುತ್ತಿದ್ದಾರೆ.
ಜೆಡಿಎಸ್ ನಡೆ ನಿಗೂಢ: ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಜೆಡಿಎಸ್ ಪಾಳಯದಲ್ಲಿ ಸ್ವಲ್ಪ ನಡುಕ ಹುಟ್ಟಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ಸಂಖ್ಯಾ ಬಲದಲ್ಲಿ ಜೆಡಿಎಸ್ ಮುಂದಿದೆ. ಜತೆಗೆ ಮತದಾರರ ಒಲವೂ ಆ ಪಕ್ಷದ ಪರವಾಗಿಯೇ ಇದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ಪ್ರಭಾವ ಸ್ವಲ್ಪ ಮಟ್ಟಿಗೆ ಕುಸಿದಿದೆ.
ಪಕ್ಷದ ನಾಯಕರ ಶಕ್ತಿ ಕುಂದಿರುವ ಭಾಗಗಳಲ್ಲಿ ಮತ್ತೆ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಪಕ್ಷದೊಳಗೆ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಯಾವ ಯಾವ ಕ್ಷೇತ್ರಗಳಲ್ಲಿ ತಪ್ಪುಗಳಾಗಿವೆಯೋ, ಮತ ಗಳಿಕೆಯಲ್ಲಿ ಎಲ್ಲೆಲ್ಲಿ ಲೆಕ್ಕಾಚಾರ ಏರು-ಪೇರಾಗಿದೆಯೋ ಅದನ್ನು ಸರಿಪಡಿಸುವ ಕೆಲಸವನ್ನೂ ಪಕ್ಷದ ವರಿಷ್ಠರು ನಡೆಸುತ್ತಿದ್ದಾರೆ.
ಮತ ಬೇಟೆಗೆ ತಂತ್ರ: ಜೆಡಿಎಸ್ ಪಾಲಿನ ಮತಗಳು ಯಾವ ಕಡೆಗೂ ಹರಿದು ಹೋಗದಂತೆ ಎಚ್ಚರಿಕೆ ವಹಿಸಲು ವರಿಷ್ಠರು ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ವರಿಷ್ಠಕ ಸೂಚನೆಯನ್ನು ಆಧಾರವಾಗಿಟ್ಟುಕೊಂಡು ಚುನಾವಣಾ ಸಿದ್ಧತೆಗೆ ಎಲ್ಲರೂ ಸನ್ನದ್ಧರಾಗುತ್ತಿದ್ದಾರೆ.
ಬಿಜೆಪಿ ಸ್ಥಿತಿ ಭಿನ್ನ: ಜಿಲ್ಲೆಯ ಮಟ್ಟಿಗೆ ಬಿಜೆಪಿ ಸ್ಥಿತಿ ಶೋಚನೀಯವಾಗಿದೆ. ಆದರೂ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನೀಡಲು ಕಾರ್ಯತಂತ್ರ ರೂಪಿಸಲು ಆರಂಭಿಸಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷದ ಶಕ್ತಿ ಪ್ರದರ್ಶಿಸಲು ನಿರ್ಧರಿಸಿದೆ.
ಕೆಜೆಪಿ, ಸರ್ವೋದಯ ದೋಸ್ತಿ: ಇನ್ನು ಕೆಜೆಪಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ನಿರ್ಧರಿಸಿದೆ. ಅದರಂತೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಕೆ.ಎಸ್.ನಂಜುಂಡೇಗೌಡ ಹಾಗೂ ಮೇಲುಕೋಟೆ ಕ್ಷೇತ್ರದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಲಿದೆ. ಮಳವಳ್ಳಿಯಿಂದ ಬಿಬಿಎಂಪಿ ಮಾಜಿ ಸದಸ್ಯ ಮುನಿರಾಜು ಅವರನ್ನು, ನಾಗಮಂಗಲದಿಂದ ಕೃಷ್ಣಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳು ಯಾರೆಂಬುದನ್ನು ಯಡಿಯೂರಪ್ಪ ಗುಟ್ಟು ಬಿಟ್ಟುಕೊಟ್ಟಿಲ್ಲ.
ಒಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ತಯಾರಿ ಜೋರಾಗಿಯೆ ನಡೆದಿದೆ. ಹೊಸ ಹುರುಪಿನೊಂದಿಗೆ ಚುನಾವಣಾ ಕದನಕ್ಕೆ ಅಣಿಯಾಗುತ್ತಿರುವ ರಾಜಕೀಯ ಪಕ್ಷಗಳು ಗೆಲುವಿನ ಗುರಿ ಮುಟ್ಟುವ ತವಕದಲ್ಲಿವೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.