ಅಕ್ರಮ ಎಸಗಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ: ಶಂಕರೇಗೌಡ
ಕನ್ನಡಪ್ರಭ ವಾರ್ತೆ ಮಂಡ್ಯ ಮಾ.25
ಕೇಂದ್ರ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ದಾವೆ ಹೂಡಬೇಕು ಎಂದು ಬ್ಯಾಂಕಿನ ಮಾಜಿ ಅಧ್ಯಕ್ಷ ಶಂಕರೇಗೌಡ ಒತ್ತಾಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕಿನ ಲೆಕ್ಕಪತ್ರಗಳನ್ನು ತಿದ್ದುವ ಮೂಲಕ ಕೇಂದ್ರದ ಬೊಕ್ಕಸಕ್ಕೆ ಮೋಸ ಮತ್ತು ವಂಚನೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಸಿವಿಲ್ ಕೇಸ್ ಜತೆಗೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಬೇಕು ಎಂದು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಲ್ಲಿ ಮನವಿ ಮಾಡಿದರು.
ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಮತ್ತು ವ್ಯವಸ್ಥಾಪಕರ ವಿರುದ್ಧ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯು ಸಹಕಾರ ಸಂಘಗಳ ಉಪನಿಬಂಧಕರ ನ್ಯಾಯಾಲಯದಲ್ಲಿ ಸೆಕ್ಷನ್ 69ರ ಅಡಿಯಲ್ಲಿ ಸರ್‌ಚಾರ್ಜ್ ದಾವೆ ದಾಖಲಿಸಲಾಗಿದೆ.
ಅಲ್ಲದೆ, ಬ್ಯಾಂಕಿನ ಅಧ್ಯಕ್ಷ ಬಿ.ಟಿ.ನಾಗರಾಜು, ನಿರ್ದೇಶಕರಾದ ಕೆ.ಜಿ.ಅನಂತರಾವ್, ಅಂದಾನಿಗೌಡ, ಸಿ.ಮಹೇಶ್, ಕೆ.ಕೃಷ್ಣ, ಬಿ.ಲಿಂಗರಾಜು, ಬಿ.ಟಿ.ಕೆಂಪಯ್ಯ ಮತ್ತು ವ್ಯವಸ್ಥಾಪಕ ಟಿ.ನಾಗರಾಜು ವಿರುದ್ಧ 62 ಲಕ್ಷಗಳನ್ನು ಶೇ.18ರ ಬಡ್ಡಿ ಸೇರಿಸಿ ಸರ್ಕಾರಕ್ಕೆ ಪಾವತಿಸುವಂತೆ ಐತೀರ್ಪು ಡಿಕ್ರಿ ಆದೇಶ ಕೋರಿ ಎಆರ್‌ಸಿಎಸ್ ದಾವೆ ಹೂಡಿದ್ದಾರೆ ಎಂದರು.
ಒಂದು ವೇಳೆ ಬ್ಯಾಂಕಿನ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಅವ್ಯವಹಾರ ಎಸಗಿರುವ ಹಣವನ್ನು ಬಡ್ಡಿ ಸಮೇತ ಸರ್ಕಾರಕ್ಕೆ ಪಾವತಿಸಲು ತಪ್ಪಿದ್ದಲ್ಲಿ ಅವರ ಚರ ಸ್ಥಿರಾಸ್ಥಿಗಳನ್ನು ಜಪ್ತಿ ಮತ್ತು ಹರಾಜು ಮೂಲಕ ಆ ಮೊಬಲಗನ್ನು ವಸೂಲು ಮಾಡಿಕೊಳ್ಳಲು ಬ್ಯಾಂಕಿನ ಪರ ಡಿಕ್ರಿ ನೀಡಬೇಕೆಂದು ಸಹ ಎಆರ್‌ಸಿಎಸ್ ಕಚೇರಿಯು ಘನ ನ್ಯಾಯಾಲಯದಲ್ಲಿ ದಾವೆ ಹೂಡಿದೆ ಎಂದು ತಿಳಿಸಿದರು.
ಸಹಕಾರಿ ಕಾಯಿದೆ ಮತ್ತು ನಿಯಮಗಳ ಉಲ್ಲಂಘನೆ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದರಿಂದ ನಿರ್ದೇಶಕರು ಆಡಳಿತ ಮಂಡಳಿಯಿಂದ ಅನರ್ಹಗೊಳಿಸಲು ಕಾಯಿದೆ ಕಲಂ 29ಸಿ (8)ರ ಅಡಿಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಶಂಕರೇಗೌಡ ಹೇಳಿದರು.
ಬ್ಯಾಂಕಿನ ಆಡಳಿತ ಮಂಡಳಿ ಗಂಭೀರ ತರವಾದ ಆರ್ಥಿಕ ಅಪರಾಧಗಳಲ್ಲಿ ತೊಡಗಿರುವುದು ಶಾಸನ ಬದ್ಧ ತನಿಖಾ ವರದಿಗಳಿಂದ ಸಾಬೀತಾಗಿದೆ. ಆದ್ದರಿಂದ ಬ್ಯಾಂಕಿನ ಸದಸ್ಯರು, ಠೇವಣಿದಾರರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಿಜಿಸ್ಟ್ರಾರ್ ಅವರು ಕನಾಂಟಕ ಸಂಘಗಳ ಕಾಯಿದೆ ಕಲಂ 30ರ ಅಧಿಕಾರವನ್ನು ಬಳಸಿ ಆಡಳಿತ ಮಂಡಳಿಯನ್ನು ವಜಾ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.