ಕೃಷ್ಣ ಸ್ಪರ್ಧೆಗೆ ಒತ್ತಾಯ
ಮದ್ದೂರು: ಕೇಂದ್ರ ಮಾಜಿ ಸಚಿವ ಎಸ್.ಎಂ. ಕೃಷ್ಣ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಪಕ್ಷದ ಮುಖಂಡರಿಂದ ಒತ್ತಾಯದ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಈಗ ಕಾಂಗ್ರೆಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಮಿತಿ ಸದಸ್ಯರಾಗಿರುವ ಎಸ್.ಎಂ. ಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ಸ್ಪರ್ಧಿಸದಿರುವ ಯಾವ ನಿರ್ಧಾರವನ್ನೂ ಪ್ರಕಟಿಸಿಲ್ಲ. ಹೀಗಾಗಿ, ಮದ್ದೂರು ಕ್ಷೇತ್ರದಲ್ಲಿನ ಪಕ್ಷದ ಮುಖಂಡರ ಗುಂಪೊಂದು ಕೃಷ್ಣ ಅವರನ್ನು ಸ್ಪರ್ಧಿಸುವಂತೆ ಮನವೊಲಿಸಲು ನಿರ್ಧರಿಸಿದ್ದಾರೆ.
1999ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಗೆಲವು ಸಾಧಿಸಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರು 2004ರ ಚುನಾವಣೆಯಲ್ಲಿ ಡಿ.ಸಿ.ತಮ್ಮಣ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿದ್ದರು.
ಕೃಷ್ಣ ಅವರ ವಲಸೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಾಕಷ್ಟು ಬೇಸರಕ್ಕೂ ಕಾರಣವಾಗಿತ್ತು. ಆಗ ಒಲ್ಲದ ಮನಸ್ಸಿನಿಂದಲೇ ಕೃಷ್ಣ ಅವರ ಪ್ರತಿಷ್ಠೆಯನ್ನು ಉಳಿಸುವ ಉದ್ದೇಶದಿಂದ 2004ರ ಚುನಾವಣೆಯಲ್ಲಿ ಡಿ.ಸಿ. ತಮ್ಮಣ್ಣ ಅವರ ಗೆಲವಿಗೆ ಪಕ್ಷದ ಮುಖಂಡರು ಶ್ರಮಿಸಿದ್ದರು.
2008ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಎಸ್.ಸಿದ್ದರಾಜು ಎದುರು ಸೋಲು ಅನುಭವಿಸಿದ ನಂತರ ಡಿ.ಸಿ. ತಮ್ಮಣ್ಣ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಜಿಗಿದಿದ್ದರು. ಇದು ಸ್ವತಃ ಕೃಷ್ಣ ಅವರಿಗೆ ಹಾಗೂ ಪಕ್ಷದ ಮುಖಂಡರ ಅಸಮಾಧಾನಕ್ಕೂ ಕಾರಣವಾಯಿತು. ಶಾಸಕ ಎಂ.ಎಸ್. ಸಿದ್ದರಾಜು ನಿಧನದ ನಂತರ ಎದುರಾದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಡಿ.ಸಿ. ತಮ್ಮಣ್ಣ ಅವರಿಗೆ ಪಾಠ ಕಲಿಸಲು ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್‌ನಿಂದ ಜಿಪಂ ಮಾಜಿ ಅಧ್ಯಕ್ಷ ಗುರುಚರಣ್ ಅವರನ್ನು ಕಣಕ್ಕಿಳಿಸಿ ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಅವರ ಗೆಲವಿಗೆ ಸಹಕಾರ ನೀಡಿದರು.
ಈಗ ಡಿ.ಸಿ. ತಮ್ಮಣ್ಣ ಜೆಡಿಎಸ್ ಪಕ್ಷಕ್ಕೆ ಜಿಗಿದಿರುವುದರಿಂದ ಟಿಕೆಟ್ ಕೈ ತಪ್ಪುವ ಆತಂಕ ಎದುರಿಸುತ್ತಿರುವ ಶಾಸಕಿ ಕಲ್ಪನಾ ಸಿದ್ದರಾಜು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದೀಗ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಪತ್ಯ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಮುಖಂಡರು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಲಿರುವ ಡಿ.ಸಿ.ತಮ್ಮಣ್ಣ ಅವರನ್ನು ಮಣಿಸುವ ಮೂಲಕ ದೇವೇಗೌಡರಿಗೆ ಮುಖಭಂಗ ಉಂಟು ಮಾಡಲು ಲೆಕ್ಕಾಚಾರ ಹಾಕಿರುವ ಕಾಂಗ್ರೆಸ್ ಮುಖಂಡರು, ಮದ್ದೂರು ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಎಸ್.ಎಂ.ಕೃಷ್ಣ ಅವರ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ಕೃಷ್ಣ ಅವರು ಸ್ಪರ್ಧೆ ಮಾಡಿದರೆ ಆಕಾಂಕ್ಷಿತರ ಸಾಲಿನಲ್ಲಿರುವ ಮಧು ಮಾದೇಗೌಡ ಮತ್ತು ಗುರುಚರಣ್ ಕೂಡ ಹಿಂದೆ ಸರಿಯಲೂ ನಿರ್ಧರಿಸಿದ್ದಾರೆ. ಕೃಷ್ಣ ಆಗಮನದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ಬರುತ್ತದೆ. ಅಲ್ಲದೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಅಭ್ಯರ್ಥಿಗಳ ಗೆಲವಿಗೆ ಸಹಕಾರಿಯಾಗುತ್ತದೆ ಎಂಬುದು ಮುಖಂಡರ ಆಲೋಚನೆ. ಹಾಗೊಂದು ವೇಳೆ ಕೃಷ್ಣ ಸ್ಪರ್ಧಿಸಲು ನಿರಾಕರಿಸಿದರೆ, ಶಾಸಕಿ ಕಲ್ಪನಾ ಸಿದ್ದರಾಜು ಅವರನ್ನು ಕಾಂಗ್ರೆಸ್‌ಗೆ ಸೆಳೆದುಕೊಂಡು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಚಿಂತನೆಗಳು ನಡೆದಿವೆ. ಇದಕ್ಕೆ ಖುದ್ಧು ಎಸ್.ಎಂ. ಕೃಷ್ಣ ಹಾಗೂ ಮಾಜಿ ಸಂಸದ ಜಿ.ಮಾದೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.
ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಶಾಸಕ ಮಧು ಮಾದೇಗೌಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಗುರುಚರಣ್ ಆಕಾಂಕ್ಷಿತ ಅಭ್ಯರ್ಥಿಗಳು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕಿ ಕಲ್ಪನಾ ಸಿದ್ದರಾಜು ಜೆಡಿಎಸ್ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳೇ ಹೆಚ್ಚಾಗಿದೆ. ಸದ್ಯಕ್ಕೆ ಕಾಂಗ್ರೆಸ್ ನಾಯಕರು, ಕಲ್ಪನಾ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
-ಎಚ್.ಜಿ. ರವಿಕುಮಾರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.