ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮಂಡ್ಯ

ಕೆಲ್ಸ ಮಾಡಿದ್ರೆ ಮಾತ್ರ ಬಾಯಿಗೆ ಸಕ್ರೆ

Parashurama
Updated On : 26 Mar 2013, 9:51 am

ಕನ್ನಡಪ್ರಭ ವಾರ್ತೆ ಮಂಡ್ಯ ಮಾ.26
ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಮೇಧಾವಿಗಳೆನಿಸಿದವರೂ ಮಣ್ಣು ಮುಕ್ಕಿದ್ದಾರೆ. ಪ್ರಶ್ನಾತೀತ ರಾಜಕೀಯ ದಿಗ್ಗಜರನ್ನು ಯುವ ನಾಯಕರು ಕೆಡವಿದ್ದು ಉಂಟು.
ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ ನಿತ್ಯ ಸಚಿವ ಬಿರುದಾಂಕಿತರಾಗಿದ್ದ ಕೆ.ವಿ.ಶಂಕರಗೌಡ, ಅಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಎಚ್.ಕೆ.ವೀರಣ್ಣಗೌಡ, ಉಪ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ, ಕಾವೇರಿ ಹೋರಾಟಗಾರರಾದ ಜಿ.ಮಾದೇಗೌಡ, ರೆಬಲ್‌ಸ್ಟಾರ್ ಅಂಬರೀಷ್ ಅವರಂಥ ಅತಿರಥ ಮಹಾರಥರೂ ಸೋಲು ಅನುಭವಿಸಿದ್ದಾರೆ.
ಬೆನ್ನು ಬಿಡದ ಸೋಲು: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜನಪರ ಕೆಲಸಗಳಿಗೆ ಯಾವತ್ತೂ ಮತದಾರ ತಲೆಬಾಗಿದ್ದಾನೆ. ಅಂತೆಯೇ ಅಧಿಕಾರವಧಿಯಲ್ಲಿ ಮರೆತಾಗ ಸಕ್ಕರೆ ಬದಲು ಮಣ್ಣುಮುಕ್ಕಿಸಿದ್ದಾರೆ.
ಮಂಡ್ಯ ಜಿಲ್ಲೆಯ ಅಭಿವೃದ್ಧಿ ಹರಿಕಾರ ಹಾಗೂ ಹಲವು ನಾಯಕರ ಗಾಡ್‌ಫಾದರ್ ಆಗಿ ರಾಜಕೀಯ ಇತಿಹಾಸ ಸೃಷ್ಟಿಸಿದವರು ಕೆ.ವಿ.ಶಂಕರಗೌಡರು. ಶಾಸಕರಾಗಿ, ಸಂಸದರಾಗಿ ಹಾಗೂ ಸಚಿವರಾಗಿ ಅಧಿಕಾರ ಅನುಭವಿಸಿದ್ದು ಕಡಿಮೆಯಾದರೂ ಮಾಡಿದ ಸಾಧನೆ ಅಪಾರ. ಇಂಥ ನಾಯಕರಿಗೂ ಸೋಲೆಂಬ ಸೋಲು ಬೆನ್ನು ಬಿಡಲಿಲ್ಲ.
1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ ಕೆ.ವಿ.ಶಂಕರಗೌಡರು, 1962, 1972ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಹಾಗೂ 1982ರಲ್ಲಿ ಕೆರಗೋಡು ಕ್ಷೇತ್ರದಿಂದ ಸೋಲು ಅನುಭವಿಸಿದರು.
1967ರ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ 4 ತಿಂಗಳು ಮುನ್ನವೇ ಕೆ.ವಿ.ಶಂಕರಗೌಡರು, ವಿಧಾನ ಪರಿಷತ್‌ಗೆ ನಾಮಕರಣಗೊಂಡು ಶಿಕ್ಷಣ ಸಚಿವರಾಗಿ ಮಹತ್ವದ ಸುಧಾರಣೆ ಜಾರಿಗೊಳಿಸಿದರು. ಮೂರು ಸೋಲುಗಳ ನಡುವೆಯೂ ಶಂಕರಗೌಡರು, ರಾಜಕೀಯದಲ್ಲಿ ಉನ್ನತ ಹೆಸರು ಸಂಪಾದಿಸಿದ್ದಾರೆ.
ಭವಿಷ್ಯದ ಸಿಎಂಗೂ ಸೋಲು: ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ 1952 ಮತ್ತು 1957ರ ಚುನಾವಣೆಯಲ್ಲಿ ಆಯ್ಕೆಯಾದರು. ಲೋಕೋಪಯೋಗಿ ಸಚಿವರಾದರು. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿದ್ದ ವೀರಣ್ಣಗೌಡರು ಭವಿಷ್ಯದ ಮುಖ್ಯಮಂತ್ರಿ ಎಂದು ಪಕ್ಷದಲ್ಲಿ ಕೂಗೆದ್ದಿತು.
1962ರ ಚುನಾವಣೆಯಲ್ಲಿ ಘೋಷಿತ ಮುಖ್ಯಮಂತ್ರಿ ವೀರಣ್ಣಗೌಡ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ, ಪಿಎಸ್‌ಪಿಯಿಂದ ಕಣಕ್ಕಿಳಿದ ಯುವ ನಾಯಕ ಎಸ್.ಎಂ.ಕೃಷ್ಣ ಕೇವಲ 1,956 ಮತಗಳ ಅಂತರದಲ್ಲಿ ವಿಜಯ ಪತಾಕೆ ಹಾರಿಸಿ ವಿಧಾನಸಭೆ ಪ್ರವೇಶಿಸಿದರು.
1967ರಲ್ಲಿ ಮತ್ತೆ ಪಿಎಸ್‌ಪಿಯಿಂದ ಕಣಕ್ಕಿಳಿದ ಎಸ್.ಎಂ.ಕೃಷ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೀರಣ್ಣಗೌಡರ ಅಳಿಯ ಎಂ.ಮಂಚೇಗೌಡ ಸೋಲಿಸಿದರು. ಅತ್ತ ಕಿರುಗಾವಲು ಕ್ಷೇತ್ರದಲ್ಲಿ ಜಿ.ಮಾದೇಗೌಡರು, ವೀರಣ್ಣಗೌಡ ಅವರನ್ನು ಪರಾಭವಗೊಳಿಸಿದರು.
1989ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಎಸ್.ಎಂ.ಕೃಷ್ಣ, ಉಪಮುಖ್ಯಮಂತ್ರಿ ಹಾಗೂ ಸ್ಪೀಕರ್ ಹುದ್ದೆಯನ್ನು ನಿಭಾಯಿಸಿದರು. 1994ರಲ್ಲಿ ಅಘೋಷಿತ ಮುಖ್ಯಮಂತ್ರಿಯಾಗಿ ಬಿಂಬಿತರಾಗಿದ್ದ ಕೃಷ್ಣ ಅವರನ್ನು ಜನತಾದಳ ಅಭ್ಯರ್ಥಿ ಮಹೇಶ್‌ಚಂದ್ ಸೋಲಿಸಿದರು. 1999ರಲ್ಲಿ ಗೆದ್ದು ಮುಖ್ಯಮಂತ್ರಿಯಾದ ತರುವಾಯ ಕೃಷ್ಣ ಕ್ಷೇತ್ರ ಬದಲಾಯಿಸಿದರು.
ಕಾವೇರಿ ಹೋರಾಟಗಾರರಾದ ಮಾಜಿ ಸಂಸದ ಜಿ.ಮಾದೇಗೌಡರು, ಕಿರುಗಾವಲು ಕ್ಷೇತ್ರದಿಂದ 1967, 1972, 1978, 1983, 1985ರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸಿ ಸೋಲಿಲ್ಲದ ಸರದಾರರಾಗಿ ಮೆರೆದರು. ನಂತರ ಕಿರುಗಾವಲು ಕ್ಷೇತ್ರ ತೊರೆದು 1989ರ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಆನಂತರ 1996 ಮತ್ತು 1998ರ ಸಂಸತ್ ಚುನಾವಣೆಯಲ್ಲಿ ಪರಾಭವಗೊಂಡರು.
ಸೋಲುಂಡ ಕೃಷ್ಣ: 1983, 1989, 1999 ಹಾಗೂ 2008ರ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ ಮಾಜಿ ಸ್ಪೀಕರ್ ಕೃಷ್ಣ ಅವರೂ ಸೋಲಿನ ರುಚಿ ಕಂಡಿದ್ದಾರೆ.
ಅಂಬಿಗೂ ಸೋಲು: ಸಿನಿಮಾ ಇಮೇಜ್‌ನಲ್ಲಿಯೇ ಮಂಡ್ಯದಲ್ಲಿ ರಾಜಕೀಯ ನೆಲೆ ಕಂಡುಕೊಂಡವರು ರೆಬಲ್‌ಸ್ಟಾರ್ ಅಂಬರೀಷ್. ರಾಮನಗರ ಕ್ಷೇತ್ರದ ಸೋಲಿನ ನಂತರ 1998, 1999 ಹಾಗೂ 2004ರ ಲೋಕಸಭೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದ ಅಂಬಿ, 2008ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸೋಲು ಅನುಭವಿಸಿದರು.
ಹೀಗೆ ಮಂಡ್ಯದ ಹೆಸರಾಂತ ರಾಜಕೀಯ ದಿಗ್ಗಜರ ಸೋಲು ಜಿಲ್ಲೆಯ ರಾಜಕೀಯ ಇತಿಹಾಸದ ಮೈಲಿಗಲ್ಲು.
ಎಂ.ಅಫ್ರೋಜ್ ಖಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments