ಮುಂದುವರಿದ ವಿದ್ಯಾರ್ಥಿಗಳ ಧರಣಿ
ಕನ್ನಡಪ್ರಭವಾರ್ತೆ ಹಾಸನ ಮಾ 26
ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಧರಣಿ ಮುಂದುವರಿಸಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ತಾವು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಡೀನ್ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಸ್ಥಳಕ್ಕೆ ಕುಲಪತಿಗಳನ್ನೇ ಕರೆಸಬೇಕು ಎಂದು ಪಟ್ಟು ಹಿಡಿದದ್ದಕ್ಕೆ ಕುಲಪತಿಗಳು ಇಲ್ಲಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ಡೀನ್ ಹೇಳಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕನಸು ಅರಳುವ ಮುನ್ನವೇ: ಕಾಲೇಜಿನ ಅವ್ಯವಸ್ಥೆ ಆಲಿಸ ಬೇಕಾದ ಸ್ನಾತಕೋತ್ತರ ಕೇಂದ್ರದವರೇ ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದರೆ, ವಿದ್ಯಾರ್ಥಿಗಳ ಪಾಡು ಯಾರ ಹತ್ತಿರ ಹೇಳಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸ್ನಾತಕೋತ್ತರ ಕೇಂದ್ರವೇ ಮುಳುವಾಗಿದ್ದು, ಭವಿಷ್ಯ ರೂಪಿಸಿಕೊಳ್ಳಲು ಬಂದಂತಹ ವಿದ್ಯಾರ್ಥಿಗಳು ಕನಸು ಅರಳುವ ಮುನ್ನವೇ ಕಮರುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು. ಕೇಂದ್ರದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸಮಸ್ಯೆಗಳು ಹೆಚ್ಚಾಗಿದ್ದು, ದೀರ್ಘಕಾಲದ ಇವು ಬಗೆ ಹರಿಯದೆ ವಿದ್ಯಾರ್ಥಿಗಳು ನಿರಂತರ ಸಂಕಷ್ಟ ಎದುರಿಸುವಂತಾಗಿದೆ. ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ದೂರಿದರು.
ವಿದ್ಯುತ್ ಸಮಸ್ಯೆ ವಿಪರೀತವಾಗಿದ್ದು, ಲ್ಯಾಬ್‌ಗಳಲ್ಲಿ ವಿದ್ಯಾರ್ಥಿಗಳು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಅಭಾವದಿಂದ ಲ್ಯಾಬ್‌ನಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗದಂತಾಗಿದೆ. ಅಷ್ಟೇ ಅಲ್ಲದೆ ಸಮಪರ್ಕ ಉಪಕರಣಗಳಿಲ್ಲದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅಡ್ಡಿಯಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ರೀತಿಯ ಕ್ರಮಗಳನ್ನು ಸ್ನಾತಕೋತ್ತರ ಕೇಂದ್ರ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎಸ್ ವ್ಯವಸ್ಥೆ: ಲೋಡ್ ಶೆಡ್ಡಿಂಗ್‌ಗೆ ಪರ್ಯಾಯವಾಗಿ ಯುಪಿಎಸ್ ಹಾಕಿಸುವುದಾಗಿ ಸ್ನಾತಕೋತ್ತರ ಕೇಂದ್ರದ ಡೀನ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ರೀತಿಯ ಭರವಸೆಗಳು ಈಡೇರಿಸಿಲ್ಲ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಂತ ಕಾರ್ಯವನ್ನು ಸಂಬಂಧಪಟ್ಟವರು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಬಗೆಹರಿಸಲು ಕೇಂದ್ರದಲ್ಲಿ ಜನರೇಟರ್ ಕಲ್ಪಿಸುವಂತೆ ಒತ್ತಾಯಿಸಿದರು. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರಕ್ಕೆ ಮಾತ್ರ ಮಲತಾಯಿ ಧೋರಣೆ ನೀತಿ ಅನುಸರಿಸಲಾಗುತ್ತಿದೆ. ಅಲ್ಲಿಗೆ ಬಣ್ಣ ಬಳಸಿ ಇಲ್ಲಿಗೆ ಸುಣ್ಣ ಬಳೆಯುವಂತಹ ಪ್ರವೃತ್ತಿ ಮಾಡಲಾಗುತ್ತಿದೆ. ಕೇವಲ ಕಣ್ಣೋರೆಸುವ ಪ್ರವೃತ್ತಿಗೆ ಸ್ನಾತಕೋತ್ತರ ಕೇಂದ್ರ ಕೈ ಹಾಕಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಅರ್ಧಕ್ಕೆ ನಿಂತ ಗೋಡೆ ಬಣ್ಣ: ನ್ಯಾಕ್ ಕಮಿಟಿ ಸ್ನಾತಕೋತ್ತರ ಕೇಂದ್ರಕ್ಕೆ ಬರುತ್ತಾರೆ ಅನ್ನೋ ಕಾರಣಕ್ಕೆ ಕಾಲೇಜಿನ ಗೋಡೆಗಳಿಗೆ ಬಣ್ಣ ಮಾಡಿಸಿ ಶೃಂಗಾರ ಗೊಳಿಸಲಾಗುತ್ತಿತ್ತು. ವಿಪರ್ಯಾಸವೆಂದ್ರೆ ನ್ಯಾಕ್ ಸಮಿತಿಯವರು ಇಲ್ಲಿಗೆ ಬರುವುದಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಗೋಡೆಗಳಿಗೆ ಬಣ್ಣ ಮಾಡಿಸುತ್ತಿದ್ದ ಕಾರ್ಯವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕಾಲೇಜಿನ ಮುಂಭಾಗದ ಬೋರ್ಡ್‌ನಲ್ಲಿ ಕಾಲೇಜಿನ ಹೆಸರು ಬರೆಸಿಲ್ಲ. ನ್ಯಾಕ್ ಕಮಿಟಿಯವರಿಗೆ ಮೋಸ ಮಾಡುವ ದೃಷ್ಟಿಯಿಂದ ಶೃಂಗಾರಕ್ಕೆ ಮುಂದಾಗಿ ಅದನ್ನು ಅರ್ಧಕ್ಕೆ ನಿಲ್ಲಿಸಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಸ್ನಾತಕೋತ್ತರ ಕೇಂದ್ರದ ಹುಡುಗರ ಹಾಸ್ಟೆಲ್ ಅರಣ್ಯದೊಳಗೆ ಇರುವುದರಿಂದ ಸಾಕಷ್ಟು ಸಮಸ್ಯೆಗಳ ಆಗರದಲ್ಲಿ ಮುಳುಗಿ ಹೋಗಿದೆ. ನಗರಕ್ಕೆ ಹತ್ತಿರದಲ್ಲಿ ಇರಬೇಕಾದ ಹಾಸ್ಟೆಲ್‌ನ್ನು ಕಾಡಿನೊಳಗೆ ನಿರ್ಮಿಸಿ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕಾಡುಮೃಗಗಳು ಅಡ್ಡಾಡುವಂತಹ ಸ್ಥಳದಲ್ಲಿ ಹಾಸ್ಟೆಲ್ ನಿರ್ಮಿಸಿರುವುದು ವಿದ್ಯಾರ್ಥಿಗಳ ಮೇಲಿರುವ ನಿರ್ಲಕ್ಷ್ಯಕೇ ಕಾರಣವಾಗಿದೆ ಎಂದು ದೂರಿದರು. ಈ ಪ್ರದೇಶದಲ್ಲಿ ಸೂಕ್ತ ಸೆಕ್ಯೂರಿಟಿ ಇಲ್ಲದ ಕಾರಣ ಕಾನೂನು ವಿರೋಧಿ ಚಟುವಟಿಕೆ ನಡೆಯುತ್ತಿವೆ. ಮರಗಳ್ಳರು ರಾತ್ರಿ ವೇಳೆ ಮರಗಳನ್ನು ಕಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ರಾತ್ರಿ ಹಾಸ್ಟೇಲ್‌ಗೆ ಹೋಗುವ ಮಾರ್ಗದಲ್ಲಿ ವಿದ್ಯುತ್ ದೀಪಗಳ ಇಲ್ಲದ್ದರಿಂದ ರಾತ್ರಿ ಈ ಮಾರ್ಗದಲ್ಲಿ ವಿದ್ಯಾರ್ಥಿಗಳ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಕಾಡು ಹಂದಿಗಳು ಗುಂಪು ಗುಂಪಾಗಿ ಸಂಚರಿಸಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತವೆ ಎಂದು ತಿಳಿಸಿದರು.
ವಿದ್ಯಾರ್ಥಿ ನಿಲಯದ ದೀಪಗಳು, ಸ್ವಿಚ್ ಬೋರ್ಡ್‌ಗಳು ಸುಟ್ಟುಹೋಗಿವೆ. ಹಾಸ್ಟೆಲ್‌ನಲ್ಲಿನ ಮಂಚ, ಕುರ್ಚಿ ಗಳು ಮುರಿದು ಹೋಗಿವೆ. ಕುರ್ಚಿ, ಮಂಚ ಸರಿಪಡಿಸುವುದಾಗಿ ಹೇಳಿ ಹಲವು ದಿನಗಳೇ ಕಳೆದಿದ್ದರೂ ವ್ಯವಸ್ಥೆ ಕಲ್ಪಿಸಿಲ್ಲ ಎಂದರು. ಸಮಸ್ಯೆ ಬಗೆಹರಿಸಿ ಸೌಕರ್ಯ ಒದಗಿ ಸುವವರೆಗೂ ಪ್ರತಿಭಟನೆ ಹಿಂಪಡೆಯುವು ದಿಲ್ಲ ಎಂದು ಪಟ್ಟು ಹಿಡಿದರು. ನಾಗರಾಜು,ಗಿರೀಶ್, ಮಹೇಶ್, ಅಯ್ಯಪ್ಪ, ಆನಂದ್,ನವೀನ್ ಕುಮಾರ್, ವಂಶಿ, ಶಶಿಧರ್, ನಿಂಗರಾಜು, ವಿಜಯಕುಮಾರ್, ಗಂಗಾಧರ್, ಜಗದೀಶ್, ತೇಜು, ಮಂಜುನಾಥ್, ಪ್ರವೀಣ್, ಕಿರಣ್, ಮೋಹನ್, ರಾಜು, ರಮೇಶ್, ಮುರಳಿ, ಶಂಕರ್, ಮನೋಹರ್, ಸುರೇಶ್ ಇತರರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.