ಭಾರತೀನಗರ: ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಮೂರು ತಿಂಗಳಾದರೂ ಹಣ ಪಾವತಿ ಮಾಡದಿರುವುದನ್ನು ಖಂಡಿಸಿ ತಳಗವಾಡಿ, ದೇವಿಪುರ, ಮಾಲಗಾರನಹಳ್ಳಿ ಮತ್ತಿತರ ಗ್ರಾಮದ ರೈತರು ಕಾರ್ಖಾನೆಯ ಅತಿಥಿ ಗೃಹ ಹಾಗೂ ಅಕೌಂಟ್ ಕಚೇರಿಗೆ ಬೀಗ ಜಡಿದು ಪ್ರತಿಭಟನಾ ಧರಣಿ ನಡೆಸಿದರು.
ಅತಿಥಿ ಗೃಹದ ಬಳಿ ಧರಣಿ ನಡೆಸಿದ ರೈತರು ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿ ಕೂಡಲೇ ಹಣ ಪಾವತಿಮಾಡಬೇಕೆಂದು ಆಗ್ರಹಿಸಿದರು.
ಸಿಪಿಎಂ ಮುಖಂಡ ತಳಗವಾಡಿ ಆನಂದ್ ಮಾತನಾಡಿ, ಕಳೆದ 15 ರಂದು ಬಾಕಿ ಹಣ ಪಾವತಿಗಾಗಿ ಚಳವಳಿ ನಡೆಸಿದ ಸಂದರ್ಭದಲ್ಲಿ ಮಾ.25 ರೊಳಾಗಿ 18 ರಿಂದ 21 ಬ್ಯಾಚ್‌ಗಳ ತನಕ ಪೂರ್ತಿ ಹಣ ಪಾವತಿ ಮಾಡುವುದಾಗಿ ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರೂ, ಇಲ್ಲಿಯವರೆಗೂ ಹಣ ಪಾವತಿಮಾಡಿಲ್ಲ ಎಂದು ಕಿಡಿಕಾರಿದರು.
ಬರದಲ್ಲಿ ತಲ್ಲಣಗೊಳ್ಳುತ್ತಿರುವ ರೈತರು ಕಷ್ಟಪಟ್ಟು ಕಾರ್ಖಾನೆಗೆ ಕಬ್ಬು ಸಾಗಿಸಿದರೂ ಕೂಡ ಹಣವನ್ನು ತಮಗೆ ಇಷ್ಟಬಂದಾಗ ಭಿಕ್ಷೆ ನೀಡುವ ರೀತಿಯಲ್ಲಿ ಕೊಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸರಿಯಾದ ಸಮಯಕ್ಕೆ ಹಣವನ್ನು ಸಂದಾಯ ಮಾಡದಿದ್ದರೆ ವಕೀಲರ ಮೂಲಕ ಕಾರ್ಖಾನೆಯ ವಿರುದ್ಧ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬಸವರಾಜು, ದೊಡ್ಡಣ್ಣ, ದೇವರಾಜು, ಹನುಮಂತು, ರವಿ, ಸಿದ್ದಪ್ಪ, ಸಿದ್ದೇಗೌಡ, ಬಸವ ಸೇರಿದಂತೆ ಇತರರು ಉಪಸ್ಥಿತರಿದ್ದರು.