ಪಾಂಡವಪುರ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಮಾ. 31ರಂದು ನಡೆಯಬೇಕಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತೆ ಅನ್ವಯ ಇರುವುದರಿಂದ ವಾರ್ಷಿಕ ಮಹಾಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷೆ ಜಿ. ಮಂಜುಳಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 30-03-2013 ರಂದು ಪಾಂಡವಪುರ ಶಿಕ್ಷಕರ ಭವನದಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ಮಹಾಸಭೆಯನ್ನು ತಹಸೀಲ್ದಾರ್ ಅದೇಶದ ಮೇರೆಗೆ ಸಭೆಯನ್ನು ಮುಂದೂಡಲಾಗಿದೆ ಅದರಿಂದ ಸಂಘದ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಮಂಜುಳ ಕೋರಿದ್ದಾರೆ.
ಅಪಘಾತ: ಮೂವರಿಗೆ ಗಾಯ
ಮಳವಳ್ಳಿ: ವೇಗವಾಗಿ ಬರುತ್ತಿದ್ದ ಲಾರಿಯೊಂದು ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ತಾಲೂಕಿನ ಅಟ್ಟುವನಹಳ್ಳಿ-ಸಾಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗಾಯಾಳುಗಳನ್ನು ತಾಲೂಕಿನ ಪಂಡಿತಹಳ್ಳಿ ಗ್ರಾಮದ ಜ್ಯೋತಿ, ಶಿವಕುಮಾರ್ ಹಾಗೂ ಚಿರಂಜೀವಿ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಮೂವರನ್ನೂ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪಿಎಸ್‌ಐ ಸುಬ್ಬಯ್ಯ ಅವರು ಜಖಂಗೊಂಡ ಈ ಕಾರಿನಿಂದ ಗಾಯಾಳುಗಳನ್ನು ಹೊರೆತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಲಾರಿ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದ್ದು, ಲಾರಿ ಹಾಗೂ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಗ್ರಾಮಾಂತರ ಪೊಲೀಸರು ಲಾರಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತದಾನದ ಹಕ್ಕು ತಪ್ಪದೇ ಚಲಾಯಿಸಿ
ಮೈಸೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಯು ಮೇ 5ರ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಜರುಗಲಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗೆ ಜಿಲ್ಲೆಯ ಎಲ್ಲ ಮತದಾರರು ಸಂವಿಧಾನಾತ್ಮಕವಾಗಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಮತ್ತು ತಪ್ಪದೆ ಚಲಾಯಿಸುವಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ. ಶಿಖಾ ಮನವಿ ಮಾಡಿದ್ದಾರೆ.
ಮೈಕ್ರೋ ವೀಕ್ಷಕರ ನೇಮಕಾತಿ ಮಾಹಿತಿ ನೀಡಲು ಸೂಚನೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನದಂದು ಸಂದಿಗ್ಧ (ಕ್ರಿಟಿಕಲ್) ಪೂರಕ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ಮೈಕ್ರೋ ವೀಕ್ಷಕರ ನೇಮಿಸಲು ಕೇಂದ್ರ ಸರ್ಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿ, ಬ್ಯಾಂಕ್, ಎಲ್‌ಐಸಿ, ಕೇಂದ್ರ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಸೇವೆಯು ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. ಈ ಕುರಿತು ಮೈಸೂರು ಜಿಲ್ಲಾಡಳಿತ ಸದರಿ ಮಾಹಿತಿ ಪಡೆಯಲು ಕ್ರಮವಹಿಸಿದೆ.