ಅಸಮರ್ಪಕ ಪಡಿತರ; ಆಕ್ರೋಶ
ಟಿ.ನರಸೀಪುರ: ತಾಲೂಕಿನ ಕೊಡಗಹಳ್ಳಿ ಗ್ರಾಮದಲ್ಲಿ ಸಂಚಾರಿ ನ್ಯಾಯ ಬೆಲೆ ಅಂಗಡಿಯಿಂದ ಪಡಿತರ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂದು ಪಡಿತರ ಕಾರ್ಡುದಾರರು ಮತ್ತು ಗ್ರಾಮಸ್ಥರು ದೂರಿದ್ದಾರೆ. ಸಮರ್ಪಕವಾಗಿ ಪಡಿತರ ವಿತರಣೆಯಾಗದ ಹಿನ್ನೆಲೆ ಸಂಚಾರಿ ನ್ಯಾಯಬೆಲೆ ಅಂಗಡಿಯನ್ನು ರದ್ದುಗೊಳಿಸಬೇಕು. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮೂಲಕ ಪಡಿತರ ಆಹಾರ ಪದಾರ್ಥಗಳ ವಿತರಣೆಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವೃದ್ಧ ಸಾವು
ಪಿರಿಯಾಪಟ್ಟಣ: ಕಾಲುಜಾರಿ ಕಾಲುವೆಗೆ ಬಿದ್ದು ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದಲ್ಲಿ ಸೋಮವಾರ ಜರುಗಿದೆ. ಗ್ರಾಮದ ಪುಟ್ಟಪ್ಪ (75) ಮೃತಪಟ್ಟ ವ್ಯಕ್ತಿ. ಗ್ರಾಮದ ಸಮೀಪ ಕಾವೇರಿ ನದಿಯ ಕಾಲುವೆಯಲ್ಲಿ ಕೈಕಾಲು ತೊಳೆಯಲು ಹೋಗಿ ಕಾಲುಜಾರಿ ಬಿದ್ದು, ಮೃತಪಟ್ಟಿದ್ದಾರೆ.
ಗೃಹಿಣಿ ನಾಪತ್ತೆ
ಸಾಲಿಗ್ರಾಮ: ದೊಡ್ಡಪ್ಪನ ಮಗಳ ಮನೆಗೆ ಆಷಾಢ ಹಬ್ಬಕ್ಕೆಂದು ಹರಂಬಳ್ಳಿ ಗ್ರಾಮಕ್ಕೆ ತೆರಳಿದ್ದ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಪತಿ ಸಾಲಿಗ್ರಾಮ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆ.ಆರ್. ಪೇಟೆ ತಾಲೂಕಿನ ಮಡುವಿನಕೊಡಿ ಗ್ರಾಮದ ಎ.ಟಿ. ರವಿ ಕಳೆದ ಏ.21 ರಂದು ಕೆ.ರಂಜಿತಾ (19) ಎಂಬವರನ್ನು ಮದುವೆಯಾಗಿದ್ದರು. ಜು 25 ರಂದು ಹರಂಬಳ್ಳಿಯ ತನ್ನ ದೊಡ್ಡಪ್ಪನ ಮಗಳ ಮನೆಗೆ ಆಷಾಢಕ್ಕೆಂದು ಹೋಗಿದ್ದು, ಅದೇ ದಿನ ಪುನ- ಹರಂಬಳ್ಳಿ ಗ್ರಾಮದಿಂದ ಸುಂಟಿಕೊಪ್ಪಕ್ಕೆ ಹೋಗುತ್ತೇನೆಂದು ಹೇಳಿ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದಾರೆ.