ಎಸಿ ಬಸವರಾಜು ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 5
ಟಿ. ನರಸೀಪುರ ತಾಲೂಕು ಬನ್ನೂರು ಹೋಬಳಿ ಮಾದಿಗಳ್ಳಿ ಗ್ರಾಮದ ಪರಿಶಿಷ್ಟ ಜನಾಂಗದವರಿಗೆ ನಿವೇಶನ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ, ಉಪ ವಿಭಾಗಾಧಿಕಾರಿ ಬಸವರಾಜು ಅವರು ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.
ಮಾದಿಗಹಳ್ಳಿ ದಲಿತರಿಗೆ 2010-11ನೇ ಸಮೀಕ್ಷೆಯಂತೆ ತಕ್ಷಣ ನಿವೇಶನ ಹಂಚಬೇಕು. ಭೂ ಸ್ವಾಧೀನ ಮಾಡಲು ಜಿಲ್ಲಾಧಿಕಾರಿ ಸೂಚಿಸಿದ್ದರೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಉಪ ವಿಭಾಗಾಧಿಕಾರಿ ಬಸವರಾಜು ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಭೂಸ್ವಾಧೀನ ತಪ್ಪಿಸಲು ಖಾಸಗಿ ವ್ಯಕ್ತಿಗಳಿಗೆ ಜಮೀನು ಮಾರಾಟ ಮಾಡುತ್ತಿರುವುದನ್ನು, ಮನೆಗಳನ್ನು ನಿರ್ಮಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಮುಖಂಡರಾದ ಮಹದೇವಯ್ಯ, ಶ್ರೀನಿವಾಸ್, ಹನುಮಂತ ಬೆಲವತ್ತ, ಗಂಗಾಧರ್, ಸೋಮಯ್ಯ ಮಲಿಯೂರು, ಶಿವಣ್ಣ, ಪುಟ್ಟಸ್ವಾಮಿ, ರಾಜೇಶ್, ಸೋಮಣ್ಣ, ದೊಡ್ಡಸಿದ್ದು, ಪುಟ್ಟರಾಜು, ವೆಂಕಟರಾಮ್, ಕುಮಾರ್, ದೇವರಾಜು, ಕೃಷ್ಣ, ರಾಜು ಇದ್ದರು.