ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕರ ಭೇಟಿ ಪರಿಹಾರ ಧನ ಶೀಘ್ರ ಬಿಡುಗಡೆಗೆ ಭರವಸೆ
ಕ.ಪ್ರ.ವಾರ್ತೆ ಹುಣಸೂರು ಆ. 5
ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ತಾಲೂಕಿನ ಹನಗೋಡು ಭಾಗದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಜಲಾವೃತಗೊಂಡ ಪ್ರದೇಶಗಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಹನಗೋಡು ಬಳಿಯ ಹಿಂಡುಗುಡ್ಲು, ದಾಸನಪುರ, ದೊಡ್ಡ ಹೆಜ್ಜೂರು, ಚಿಕ್ಕಹೆಜ್ಜೂರು, ಮುದುಗನೂರು, ಕೊಳುವಿಗೆ, ಕೋಣನ ಹೊಸಳ್ಳಿ, ನೇಗತ್ತೂರು, ಅಬ್ಬೂರು ಗ್ರಾಮಗಳಿಗೆ ಭೇಟಿ ನೀಡಿ, ನದಿಯ ಪ್ರವಾಹದ ನೀರು ಜಮೀನಿಗೆ ನುಗ್ಗಿ ಬೆಳೆ ನಷ್ಟವಾಗಿರುವುದನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿ, ಆತ್ಮ ಸ್ಥೈರ್ಯ ತುಂಬಿದರು.
ಹನಗೋಡು ಹೋಬಳಿಯಲ್ಲಿ ಕಳೆದೆರಡು ತಿಂಗಳಿಂದ ಮಳೆ ಒಂದು ದಿನವು ಬಿಡುವು ನೀಡದೆ ಸುರಿದಿರುವುದರಿಂದ ತಂಬಾಕು, ಜೋಳ, ಹತ್ತಿ, ಕಬ್ಬು ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಗಳು ಹೊಲದಲ್ಲೆ ಮುರುಟಿ ಹೋಗಿದೆ. ಅಲ್ಲದೆ ಪ್ರವಾಹದ ನೀರು ಬೆಳೆಗಳಿಗೆ ನುಗ್ಗಿದ್ದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆ. ತಾವು ಸರಕಾರದ ಮೇಲೆ ಒತ್ತಡ ತಂದು ಪರಿಹಾರ ಕೊಡಿಸಬೇಕೆಂದು ರೈತರು ಶಾಸಕರಲ್ಲಿ ಮನವಿ ಮಾಡಿದರು. ಪರಿಹಾರದ ಹಣ ಆದಷ್ಟು ಬೇಗ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆಂದು ರೈತರಿಗೆ ಶಾಕಕರು ಭರವಸೆ ನೀಡಿದರು.
ಕೆರೆಗಳಿಗೆ ನೀರು ಹರಿಸಿ: ಲಕ್ಷ್ಮಣತೀರ್ಥ ನದಿಯಿಂದ ಹನಗೋಡು ಭಾಗದ ಕೊಳವಿಗೆ ಕಡೆಯಿಂದ ಮುದುಗನೂರು ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದೇ ಆದಲ್ಲಿ ಈ ಕೆರೆಯಿಂದ ಚಿಕ್ಕಹೆಜ್ಜೂರು, ದೊಡ್ಡಹೆಜ್ಜೂರು ಕೆರೆಗಳು ತುಂಬಲಿವೆ. ಅಲ್ಲದೆ ಸಾವಿರ ಎಕರೆಗೂ ಹೆಚ್ಚು ಪ್ರದೇಶ ನೀರಾವರಿಯಾಗಲಿದೆ ಎಂದು ಮುದುಗನೂರಿನ ಶ್ರೀನಿವಾಸ್, ಕಸ್ತೂರಿಗೌಡ ಮನವಿ ಮಾಡಿದರೆ, ಹನಗೋಡು ಅಣೆಕಟ್ಟೆ ಬಳಿಯ ಹಿಂಡುಗುಡ್ಲು ಭಾಗದ ಕಡೆಗೆ ತಡೆಗೋಡೆ ನಿರ್ಮಿಸಿಕೊಟ್ಟಲ್ಲಿ ಪ್ರವಾಹದ ನೀರು ತಡೆಗಟ್ಟುವುದರಿಂದ ಬೆಳೆ ನಾಶವಾಗುವುದು ತಪ್ಪಲಿದೆ ಎಂದು ರೈತರು ಮನವಿ ಮಾಡಿದರು.
ಜಿಲ್ಲಾಧಿಕಾರಿಯೊಂದಿಗೆ ಚರ್ಚೆ: ಈಗಾಗಲೇ ಅಧಿಕಾರಿಗಳು ಬೆಳೆ ಹಾನಿ, ಮನೆಹಾನಿ ಹಾಗೂ ಎಂಇಂಜಿನಿಯರು ರಸ್ತೆ, ಮೋರಿ ಮತ್ತಿತ್ತರ ಹಾನಿ ಬಗ್ಗೆ ವರದಿ ತಯಾರಿಸಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಮನವಿ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಜಿಪಂ ಸದಸ್ಯೆ ಪುಷ್ಪಾವತಿ ಅಮರನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜು, ಮುಖಂಡರಾದ ದೇವರಾಜ್, ಗಿರಿಧರ್, ಶಿವಕುಮಾರ್, ಮಧು ಮತ್ತಿತರರು ಇದ್ದರು.