ಮಳೆ; ಶೀತಾಂಶ ಹೆಚ್ಚಳ:ತಂಬಾಕು ಬೆಳೆಗೆ ಹಾನಿ
ಕ.ಪ್ರ.ವಾರ್ತೆ ಸಾಲಿಗ್ರಾಮ್ಣ ಆ. 5
ಕೊಳೆಯುತ್ತಿರುವ ತಂಬಾಕಿನಿಂದ ರೈತ ಕಂಗಾಲು. ಕೈಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆದ ಹೊಗೆಸೊಪ್ಪು ಶೀತಾಂಶ ಹೆಚ್ಚಾಗಿ ಬ್ಯಾರನ್ನಲ್ಲಿಯೇ ಕೊಳೆಯುತ್ತಿದ್ದು, ರೈತರು ಆತಂಕ ಪಡುವಂತಾಗಿದೆ. ಈ ಸಲ ಉತ್ತಮ ಮಳೆಯಾಗಿದ್ದು, ರೈತ ಬಾಂಧವರು ಕುಟುಂಬ ಸಮೇತರಾಗಿ ದುಡಿದು ಹೊಗೆಸೊಪ್ಪುನ್ನು ಸಮೃದ್ಧಿಯಾಗಿ ಬೆಳೆದಿದ್ದಾರೆ. ವಿಪರ್ಯಾಸವೆಂದರೆ ತಂಬಾಕು ಸೊಪ್ಪು ಬೇಯಿಸಲು ಬ್ಯಾರನ್ ಮನೆಗೆ ಹಾಕಿ ಮೂರ್ನಾಲ್ಕು ದಿನ ಬೇಯಿಸಿದರೂ ಸೊಪ್ಪು ಬೇಯದೆ ಶೀತಾಂಶ ಜಾಸ್ತಿಯಾಗಿರುವ ಕಾರಣ ಕೊಳೆತು ಬೀಳುತ್ತಿದೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದ ತಂಬಾಕು ಸೊಪ್ಪು ಕೊಳೆತು ತಿಪ್ಪೆ ಗುಂಡಿ ಸೇರುತ್ತಿದೆ. ಸಾವಿರಾರು ರು. ನಷ್ಟ ಸಂಭವಿಸಿದೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಾದ ರಾಂಪುರ, ಮಾದಾಪುರ, ದಡದಹಳ್ಳಿ, ಎಲೆದಹಳ್ಳಿ, ಮಾವನೂರು, ಕೆಡಗ ಮತ್ತು ಹೆಬ್ಸೂರು ಈ ಭಾಗಗಳಲ್ಲಿ ಬೆಳೆದಿರುವ ಹೊಗೆಸೊಪ್ಪು ಬ್ಯಾರನ್ ಮನೆಗಳಲ್ಲಿ ಶೀತಾಂಶದಿಂದ ಕೊಳೆತು ಕಡ್ಡಿಯಿಂದಲೆ ಕೆಳಗೆ ಬೀಳುತ್ತಿದೆ.
ಒಂದು ಸಿಂಗಲ್ ಬ್ಯಾರನ್ ಮನೆಗೆ ಅಂದಾಜು 18 ರಿಂದ 22 ಸಾವಿರ ರು. ನಷ್ಟ ಉಂಟಾಗುತ್ತಿದೆ. ಇಷ್ಟಾದರೂ ತಂಬಾಕು ಮಂಡಳಿಯ ಅಧಿಕಾರಿಗಳು ಇತ್ತ ಕಡೆ ಮಾತ್ರ ತಲೆ ಹಾಕಿಲ್ಲ. ಈ ನಿಟ್ಟಿನಲ್ಲಿ ರೈತರು ಎದುರು ನೋಡುತ್ತಿದ್ದಾರೆ.