ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಯುವಕರು ಓದಿಗೆ ಆದ್ಯತೆ ನೀಡಿ'

Rashmi Kasaragodu
Updated On : 6 Aug 2013, 12:44 pm

ಕ.ಪ್ರ.ವಾರ್ತೆ   ಮೈಸೂರು   ಆ. 5
ಇಂದು ಯುವ ಜನತೆಯಲ್ಲಿ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ವಿಷಾದಿಸಿದರು.
ಇಲ್ಲಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.  
ಮೊಬೈಲ್ ಹಾಗೂ ಕಂಪ್ಯೂಟರ್ ಬಂದ ಮೇಲೆ ಹೆಚ್ಚಿನ ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ವೃತ್ತ ಪತ್ರಿಕೆ ಹಾಗೂ ಪುಸ್ತಕ ಓದುವ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂದರು.  
ತಮ್ಮ ಭಾವನೆಗಳನ್ನು ಶೇ.95 ಮಂದಿ ಪೋಷಕರು ಮಕ್ಕಳ ಮೇಲೆ ಹೇರುತ್ತಿದ್ದು, ತಾವು ಯಾವುದನ್ನು ಸಾಧಿಸಲು ಸಾಧ್ಯವಾಗಲಿಲ್ಲ ಅದನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಇಂತಹ ಒತ್ತಡದ ಪ್ರವೃತ್ತಿ ವ್ಯಕ್ತಿ ಹಾಗೂ ಸಮಾಜದ ಬೆಳವಣಿಗೆಗೆ ಮಾರಕ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಮಾತನಾಡಿ, ಬ್ರಿಟಿಷರ ಕೈಯಲ್ಲಿ ನೂರಾರು ವರ್ಷಗಳ ಕಾಲ ಆಳಿಸಿಕೊಂಡಿದ್ದ ಭಾರತ, ಸ್ವಾತಂತ್ರ್ಯ ಪಡೆದು 20- 30 ವರ್ಷಗಳಾದ ಮೇಲೂ ಜನರಿಗೆ ಸ್ವತಂತ್ರದ ಪರಿಕಲ್ಪನೆ ಇರಲಿಲ್ಲ. ಇದೀಗ ಗ್ರಾಮೀಣ ಭಾಗದಲ್ಲೂ ಸುಧಾರಣೆಯಾಗುತ್ತಿದೆ ಎಂದರು.  
ಆಂಗ್ಲರ ಪದ್ಧತಿ ಇನ್ನೂ ಜೀವಂತ: ಎನ್ಸಿಸಿ, ಎನ್ಎಸ್ಎಸ್ ಸೇವೆ ಸಲ್ಲಿಸಿದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ ನಾಟಕ, ಸಂಗೀತ ಮತ್ತಿತರ ಕಲೆಗಳಲ್ಲಿ ತರಬೇತಿ ಪಡೆದವರಿಗೆ ಆದ್ಯತೆ ನೀಡಬೇಕು. ಇಂದಿಗೂ ಆಂಗ್ಲರ ಶಿಕ್ಷಣ ಪದ್ಧತಿ ಇನ್ನು ಜೀವಂತವಾಗಿರುವುದು ದುರಂತದ ಸಂಗತಿ. ದೇಶದ ಶಿಕ್ಷಣ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದರ ನಿವಾರಣೆಗೆ ಯುವಜನತೆ ಮುಂದಾಗಬೇಕು ಎಂದರು. ಉಪ ಪ್ರಾಂಶುಪಾಲ ಡಾ.ಸಯ್ಯದ್ ಶಕೀಬ್ ಉರ್ ರೆಹಮಾನ್, ಸಂಸ್ಥೆ ಅಧ್ಯಕ್ಷ ಎನ್.ಅರುಣ್ಕುಮಾರ್, ಉಪಾಧ್ಯಕ್ಷ ಶಿವಶಂಕರ್ ಇದ್ದರು. ಪ್ರಾಂಶುಪಾಲ ಡಾ.ಎಲ್.ಬಸವರಾಜ್ ಸ್ವಾಗತಿಸಿದರು.  ಪಾರ್ಥಸಾರಥಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement