ನಾಳೆಯಿಂದ ಕರಗ ಮಹೋತ್ಸವ
ಮೈಸೂರು: ಚಾಮುಂಡೇಶ್ವರಿ ಮತ್ತು ಕರುಮಾರಿಯಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಆ.8 ರಿಂದ 11 ರವರೆಗೆ ಚಾಮುಂಡೇಶ್ವರಿ, ಕರುಮಾರಿಯಮ್ಮನವರ 83ನೇ ವರ್ಷದ ಕರಗ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಕೇರಳದ ಹೆಸರಾಂತ ಕಲಾವಿದರಾದ ಚೈಯ್ಯಂ ಮತ್ತು ಸಿಂಗಾರಿ ಮೇಳಂ, ತಮಿಳುನಾಡಿನ ಸುಪ್ರಸಿದ್ಧ ಕಲಾತಂಡಗಳಾದ ನೈಯ್ಯಾಂಡಿ ಮೇಳಂ ಕರಗ ಮತ್ತು ಕಾವಡಿ ಆಟಗಳು ಭಾಗವಹಿಸುತ್ತಿವೆ. ಆ. 10ರ ಸಂಜೆ 7ಕ್ಕೆ ಕರಗ ಮಹೋತ್ಸವದ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸಲಿದ್ದು, ಸಂಸದ ಎಚ್. ವಿಶ್ವನಾಥ್, ಶಾಸಕ ಎಂ.ಕೆ. ಸೋಮಶೇಖರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು.
ಕರಗ ಮಹೋತ್ಸವವು ದೇವಸ್ಥಾನದಿಂದ ಹೊರಟು ರಾಮಲಿಂಗೇಶ್ವರ ದೇವಸ್ಥಾನ, ಚಾಮುಂಡಿಪುರಂ ವೃತ್ತ, ನಂಜುಮಳಿಗೆ ವೃತ್ತ, ನಾರಾಯಣಶಾಸ್ತ್ರಿ ರಸ್ತೆ, ವಾಣಿವಿಲಾಸ ರಸ್ತೆ, ತ್ಯಾಗರಾಜ ರಸ್ತೆ, ನೂರೊಂದು ಗಣಪತಿ ರಸ್ತೆ, ಬಸವೇಶ್ವರ ರಸ್ತೆ ಮುಖಾಂತರ ಸ್ವಸ್ಥಾನಕ್ಕೆ ಮರಳಲಿದೆ.
ಪೂಜಾ ಕೈಂಕರ್ಯ: ಕರಗ ಮಹೋತ್ಸವ ಅಂಗವಾಗಿ ನಾಲ್ಕು ದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮ ಜರುಗಲಿದೆ. ಆ. 8ರ ಬೆಳಗ್ಗೆ 10ಕ್ಕೆ ಕರಗ ಮಹೋತ್ಸವ ಮೆರವಣಿಗೆಯು ದೇವಸ್ಥಾನದಿಂದ ಆರಂಭವಾಗಿ ವಿದ್ಯಾರಣ್ಯಪುರಂ 4ನೇ ಮುಖ್ಯರಸ್ತೆ 16ನೇ ಅಡ್ಡ ರಸ್ತೆ ಮೂಲಕ ದೇವಸ್ಥಾನಕ್ಕೆ ಮರಳಲಿದೆ. ಆ. 9ರ ಬೆಳಗ್ಗೆ 8ಕ್ಕೆ ಕರಗವು ದೇವಸ್ಥಾನದಿಂದ ಹೊರಟು ಕನಕಗಿರಿಯ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನ ವಾಪಸ್ಸಾಗಲಿದೆ. ಆ. 10ರ ಬೆಳಗ್ಗೆ 8ಕ್ಕೆ ಕರಗವು ದೇವಸ್ಥಾನದಿಂದ ಹೊರಟು 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ ಮೂಲಕ 2 ಮತ್ತು 4ನೇ ಮುಖ್ಯರಸ್ತೆಗೆ ಸಂಬಂಧಪಟ್ಟ ಅಡ್ಡ ರಸ್ತೆಗಳಿಗೆ ತೆರಳಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ ವಾಪಸ್ಸಾಗಲಿದೆ. ಆ.11ರ ಬೆಳಗ್ಗೆ 8ಕ್ಕೆ ಕರಗವು ದೇವಸ್ಥಾನದಿಂದ ಹೊರಟು ಚಾಮುಂಡಿಪುರಂ ತಲುಪಿ, ಅಲ್ಲಿಂದ ವಾಪಸ್ಸಾಗಲಿದೆ.