ಪಶ್ಚಿಮಘಟ್ಟ ಸಂರಕ್ಷಣೆ ಭಾರೀ ಸವಾಲಿನ ಕೆಲಸ: ಹರೀಶ್ ಭಟ್
ಕ.ಪ್ರ.ವಾರ್ತೆ ಮೈಸೂರು ಆ. 6
ಪಶ್ಚಿಮಘಟ್ಟ ಸಂರಕ್ಷಿಸುವುದು ಸವಾಲಿನ ಕೆಲಸವಾಗಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವೈಲ್ಡ್ ಲೈಫ್ ಎಕಾಲಜಿ ವಿಭಾಗದ ವಿಜ್ಞಾನಿ ಹರೀಶ್ ಆರ್. ಭಟ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ 'ಜೀವ ವೈವಿಧ್ಯತೆ ಸಂರಕ್ಷಣೆಯ ನಿಟ್ಟಿನಲ್ಲಿ ಮುಂದಿರುವ ಸವಾಲುಗಳು' ಕುರಿತ ಸಂರಕ್ಷಣಾ ನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಶ್ಚಿಮಘಟ್ಟ ಪ್ರದೇಶವು ಸಾಕಷ್ಟು ಮಳೆಯಾಗುವ ಪ್ರಮುಖ ಪ್ರದೇಶಗಳಲ್ಲಿ ಒಂದು. ಅಲ್ಲಿರುವ ಜೀವವೈವಿಧ್ಯೆತೆ ಮತ್ತು ಮಣ್ಣಿನ ಫಲವತ್ತತೆಯು ಬಹಳ ಮುಖ್ಯವಾಗಿದೆ. ಆದರೆ ಅದನ್ನು ಸಂರಕ್ಷಿಸುವುದು ಈಗ ಸವಾಲಿನ ಕೆಲಸವಾಗಿದೆ. ಪಾರ್ಥೇನಿಯಂ, ಲಂಟಾನ ಮತ್ತು ರಿಬಟೋರಿಯಂ ಮುಂತಾದ ಸಸ್ಯಗಳು ಹೆಚ್ಚಾಗಿ ಕಾಡಿಗೆ ಕಂಟಕವಾಗಿವೆ. ಅಲ್ಲದೆ ನೀಲಗಿರಿ ಜಾತಿಗೆ ಸೇರಿದ ಮರಗಳು ಕಾಡಿನ ಪ್ರಮಾಣವನ್ನು ಕಡಿಮೆ ಮಾಡುವ ಜೊತೆಗೆ ಅಂತರ್ಜಲದ ಮೇಲೆ ತನ್ನ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದರು.
ಮಾನವ ದಬ್ಬಾಳಿಕೆ ದೊಡ್ಡದು: ಜೀವ ವೈವಿಧ್ಯತೆಯು ಪರಿಸರಕ್ಕೆ ಅಗತ್ಯವಿರುವ ಗಾಳಿ, ವಾತಾವರಣ, ಜಲ, ಬೀಜಪ್ರಸಾರ ಮತ್ತು ಕೊರೆಯುವಿಕೆ ತಪ್ಪಿಸುವ ಮೂಲಕ ಹೆಚ್ಚು ಸಹಕಾರಿಯಾಗಿದೆ. ಇದು ನಮ್ಮ ಭೂಮಿಯ ಸ್ಥಿತಿಗತಿ ಸೂಚಿಸುತ್ತದೆ. ಮಾನವನ ಹಲವು ಚಟುವಟಿಕೆಗಳು ವಿಶ್ವದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ವಿಶ್ವದ ಎಲ್ಲಾ ದೇಶಗಳು ಮತ್ತು ವಿವಿಧ ವರ್ಗಗಳು ಸಂರಕ್ಷಣೆಯ ಜವಾಬ್ದಾರಿ ಹಂಚಿಕೊಳ್ಳಬೇಕಿದೆ ಎಂದು ಹರೀಶ್ ಭಟ್ ಹೇಳಿದರು.
ಸವಾಲುಗಳು ಮುಂದಿವೆ: ನಗರೀಕರಣ, ಹೆಚ್ಚಿನ ಅನುಕೂಲತೆಗಳ ಬೇಡಿಕೆ, ವಿದ್ಯುತ್ ಉತ್ಪಾದನೆ, ನೈಸರ್ಗಿಕ ಮೂಲಗಳು, ವಾಣಿಜ್ಯ ಬೆಳೆಯ ವಿಸ್ತರಣೆ, ಪ್ರದೇಶಗಳ ಅತಿಕ್ರಮಣ ಮುಂತಾದ ಕಾರಣದಿಂದ ಅರಣ್ಯ ಪ್ರದೇಶಗಳ ಪರಿವರ್ತನೆ ಮತ್ತು ನೈಸರ್ಗಿಕ ನೆಲೆಗಳ ನಾಶದಿಂದಾಗಿ ಪ್ರಾಣಿಗಳ ಅವುಗಳ ಆಹಾರಕ್ಕಾಗಿ ತಮ್ಮ ನೈಜ ನೆಲೆಯಿಂದ ಹೊರತಾದ ಪ್ರದೇಶಗಳಲ್ಲಿ ವಾಸಿಸುವುದು ಕಂಡುಬರುತ್ತಿದೆ.
ಈ ಕಾರಣದಿಂದ ನಮ್ಮ ನಿಸರ್ಗ ಮತ್ತು ನೈಸರ್ಗಿಕ ಸಂಪನ್ಮೂಲಗಳ ಹಾಗೂ ನಮ್ಮ ಮುಂದಿನ ಪೀಳಿಗೆಯ ರಕ್ಷಣೆ ಮತ್ತು ಅವುಗಳ ನಿರ್ವಹಣೆಯಲ್ಲಿ ಹಲವಾರು ಸವಾಲುಗಳು ನಮ್ಮ ಮುಂದಿದೆ ಎಂದರು. ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಇದ್ದರು.