ಬೆಮೆಲ್ ದಕ್ಷ ಕಾರ್ಮಿಕನಿಗೆ ದಕ್ಕಿದ ನ್ಯಾಯ
ಬೆಂಗಳೂರು: ಆತ ತನ್ನ ಕಚೇರಿಯ ಯಂತ್ರಗಳನ್ನು ಸ್ವಚ್ಛಗೊಳಿಸಲು ಮನೆಯಿಂದಲೇ ಹಾರ್ಪಿಕ್ ಹಾಗೂ ಸಬೀನಾ ಪೌಡರ್ ಕೊಂಡೊಯ್ಯುವಷ್ಟು ದಕ್ಷ ಕಾರ್ಮಿಕ. ಆದರೆ, ದಕ್ಷತೆಗೆ ಸಂಸ್ಥೆ ನೀಡಿದ್ದು ಕಳ್ಳನ ಬಿರುದು ಹಾಗೂ ಅಮಾನತ್ತಿನ ಬಹುಮಾನ. !
ಇಷ್ಟೇ ಅಲ್ಲ, ತಾನು ಮಾಡಿದ್ದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಕ್ಕೆ ದೊರೆತ ಕೊಡುಗೆಯೆಂದರೆ ಕೆಲಸದಿಂದ ವಜಾಗೊಂಡ ಆದೇಶ!
ಇದು ಭಾರತ್ ಅರ್ಥ್ ಮೂವರ್ಸ್ ಸಂಸ್ಥೆಯ (ಬೆಮೆಲ್) ಮೈಸೂರು ಘಟದಿಂದ ಆದ ಎಡವಟ್ಟು.
ತನ್ನ ಪಾಳಿ ಮುಗಿಸಿ ಹಿಂದಿರುಗುತ್ತಿದ್ದ ಕಾರ್ಮಿಕ ಎಸ್. ಮತಿ ಮೋಹನ್ರಾಜ್ ಬ್ಯಾಗಿನಲ್ಲಿ 200 ಎಂಎಲ್ ಹಾರ್ಪಿಕ್ ಹಾಗೂ 500 ಗ್ರಾಂ ಸಬೀನಾ ಪೌಡರ್ ದೊರೆತಿತ್ತು. ಇದು ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟ ಸಂಸ್ಥೆಯ ಆಡಳಿತ ಮಂಡಳಿ ವಿವರಣೆಯನ್ನು ಪರಿಗಣಿಸದೆ ಮೋಹನ್ರಾಜ್ ಅವರನ್ನು ಅಮಾನತುಗೊಳಿಸಿತ್ತು.
ಇದೀಗ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಸಂಸ್ಥೆಯ ಅಚಾತುರ್ಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಮೋಹನ್ರಾಜ್ ಅಮಾನತು ಆದೇಶವನ್ನು ರದ್ದುಗೊಳಿಸಿ ಮೂರು ತಿಂಗಳಲ್ಲಿ ಮರು ನೇಮಕ ಮಾಡಿಕೊಳ್ಳುವಂತೆ ಆದೇಶಿಸಿದೆ. ಜೊತೆಗೆ ಮೋಹನ್ರಾಜ್ ವಿರುದ್ಧದ ದೋಷಾರೋಪ ಪಟ್ಟಿಯನ್ನು ಕೂಡ ರದ್ದುಗೊಳಿಸಿದೆ.
ಅಕ್ರಮ ಸಂಗ್ರಹದ ಆರೋಪ: ಸಂಸ್ಥೆಯ ಇಂಜಿನ್ ವಿಭಾಗದಲ್ಲಿ ಫಿಟ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ರಾಜ್ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಿದ ಸಮಿತಿ, ಅವರ ಕಬೋರ್ಡ್ನಲ್ಲಿ ಸಂಸ್ಥೆಯ ಸುಮಾರು 40 ವಸ್ತುಗಳ ಸಂಗ್ರಹವಿದೆ ಎಂದು ಆರೋಪಿಸಿತ್ತು.