ರೈತರಿಗೆ ಉಚಿತ ಪಂಪ್ಸೆಟ್ ಅಳವಡಿಕೆ ಒಪ್ಪಂದ
ಕ.ಪ್ರ.ವಾರ್ತೆ ಮೈಸೂರು ಆ. 6
ವಿದ್ಯುತ್ ಉಳಿತಾಯಕ್ಕಾಗಿ ರೈತರಿಗೆ ಉಚಿತವಾಗಿ ಪಂಪ್ಸೆಟ್ಗಳನ್ನು ಅಳವಡಿಸಿಕೊಡಲು ಕೇಂದ್ರ ಸರ್ಕಾರದ ಇಂಧನ ಇಲಾಖೆಯ ಇಇಎಸ್ಎಲ್ (ಎನರ್ಜಿ ಎಫಿಸಿಯನ್ಸಿ ಸರ್ವೀಸ್ ಲಿಮಿಟೆಡ್) ಮುಂದಾಗಿದೆ.
ಈ ಸಂಬಂಧ ಒಡಂಬಡಿಕೆಗೆ ಸೆಸ್ಕ್ ಮತ್ತು ಇಇಎಸ್ಎಲ್ ಅಧಿಕಾರಿಗಳು ಮಂಗಳವಾರ ಒಡಂಬಡಿಕೆಗೆ, ಸಹಿ ಹಾಕಿದರು.
ಕೃಷಿ ಬೇಡಿಕೆ ಪರ ನಿರ್ವಹಣೆ ಅನುಷ್ಠಾನ ಎಂಬ 6 ವರ್ಷದ ಪೈಲೆಟ್ ಯೋಜನೆಗಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಪುರ, ಬಾಣಸಮುದ್ರ, ಅಂತರಹಳ್ಳಿ ಮತ್ತು ಚಂದಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಗ್ರಾಮಗಳ ರೈತರಿಗೆ ಸೇರಿದ ಜಮೀನುಗಳಲ್ಲಿ 1300 ಕೃಷಿ ಪಂಪ್ಸೆಟ್ಗಳನ್ನು ಹೊಸದಾಗಿ ಅಳವಡಿಸಿಕೊಡಲಾಗುವುದು ಎಂದು ಇಇಎಸ್ಎಲ್ ತಾಂತ್ರಿಕ ಉಪ ವ್ಯವಸ್ಥಾಪಕ ಶಶಿಕಾಂತ್ ತಿಳಿಸಿದರು.
ಈ ಪೈಲೆಟ್ ಯೋಜನೆಯು 3 ತಿಂಗಳೊಳಗೆ ಆರಂಭಿಸಲಾಗುವುದು. ವಿದ್ಯುತ್ ಉಳಿತಾಯ ಪಂಪ್ಸೆಟ್ ಅಳವಡಿಸಲು ತಗಲುವ ಸುಮಾರು 10 ಕೋಟಿ ರು. ವೆಚ್ಚವನ್ನು ಇಇಎಸ್ಎಲ್ ನೀಡಲಿದೆ. ಈ ಯೋಜನೆಗಾಗಿ ಸೆಸ್ಕ್ ಮತ್ತು ರೈತರು ಯಾವುದೇ ರೀತಿಯ ಹಣ ಹೂಡಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಯೋಜನೆಯಿಂದ ಸೆಸ್ಕ್ಗೆ ವಿದ್ಯುತ್ ಖರೀದಿ ವೆಚ್ಚ ಇಳಿಕೆ, ಲೋಡ್ಶೆಡ್ಡಿಂಗ್ ಇಳಿಕೆ ಹಾಗೂ ವಿದ್ಯುತ್ ಉಳಿತಾಯ ಆಗಲಿದೆ. ಕೃಷಿ ಬೇಡಿಕೆ ಪರ ನಿರ್ವಹಣೆ ಅನುಷ್ಠಾನದಿಂದ ರೈತರಿಗೆ ಉಚಿತ ಪಂಪ್ಸೆಟ್, ದುರಸ್ತಿ ಮತ್ತು ನಿರ್ವಹಣೆ ವೆಚ್ಚ ಕಡಿತ ಸೇರಿದಂತೆ ಇನ್ನಿತರ ಉಪಯೋಗವಾಗಲಿದೆ ಎಂದು ಅವರು ಹೇಳಿದರು.
ರಾಜ್ಯದ ಹೆಸ್ಕಾಂ ವ್ಯಾಪ್ತಿಯಲ್ಲಿ 11000 ಪಂಪ್ಸೆಟ್ಗಳನ್ನು ಅಳವಡಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 17000 ಪಂಪ್ಸೆಟ್ಗಳ ಅಳಡಿಸುವ ಸಂಬಂಧ ಪ್ರಸ್ತಾವನೆ ಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದರು. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಎ.ಬಿ. ಇಬ್ರಾಹಿಂ, ತಾಂತ್ರಿಕ ನಿರ್ದೇಶಕ ಭಾಗ್ಯನಾಯ್ಕ, ತಾಂತ್ರಿಕ ಪ್ರಧಾನ ವ್ಯವಸ್ಥಾಪಕ ವಿಜಯೇಂದ್ರರಾವ್ ಇದ್ದರು.