ಹೆಣ್ಣಾನೆ ಶವ ಪತ್ತೆ
ಕ.ಪ್ರ.ವಾರ್ತೆ ಹುಣಸೂರು ಆ. 6
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ್ದ ಕೊಡಗಿನ ವಿರಾಜಪೇಟೆ ಪ್ರಾದೇಶಿಕ ಅರಣ್ಯ ವಿಭಾಗದ ತಿತಿಮತಿ ಬಳಿಯ ಚನ್ನಂಗಿ ಸೆಕ್ಷನ್ನಲ್ಲಿ ಸುಮಾರು 15 ದಿನಗಳ ಹಿಂದೆ ಮೃತಪಟ್ಟಿರಬಹುದಾದ ಹೆಣ್ಣಾನೆಯ ಶವ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ಗಸ್ತಿಗೆ ತೆರಳಿದ್ದ ವೇಳೆ ಬರುತ್ತಿದ್ದ ದುರ್ವಾಸನೆಯಿಂದ ಆನೆ ಶವವನ್ನು ಪತ್ತೆ ಹಚ್ಚಲಾಯಿತು. ಶವ ಕೊಳೆತ ಸ್ಥಿತಿಯಲ್ಲಿದ್ದುದರಿಂದ ಯಾವ ಕಾರಣದಿಂದ ಮೃತಪಟ್ಟಿದೆಯೆಂಬುದು ದೃಢಪಟ್ಟಿಲ್ಲ. ಸ್ಥಳಕ್ಕೆ ಎಸಿಎಫ್ ಕಾರ್ಯಪ್ಪ, ವಲಯ ಅರಣ್ಯಾಧಿಕಾರಿ ಗೋಪಾಲ್ ಭೇಟಿ ನೀಡಿದ್ದರು. ಪಶುವೈದ್ಯ ಡಾ. ಉಮಾಶಂಕರ್ ಶವಪರೀಕ್ಷೆ ನಡೆಸಿದರು.
ಅರಣ್ಯ ಹಕ್ಕು ಪತ್ರ ನೀಡುವಂತೆ ಆಗ್ರಹ
ಹುಣಸೂರು; ಅರಣ್ಯ ಹಕ್ಕುಗಳ ಮಾನ್ಯತಾ ಕಾಯ್ದೆ 2006ರನ್ವಯ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಸಾಮೂಹಿಕ ಅರಣ್ಯ ಹಕ್ಕುಪತ್ರ ಹಾಗೂ ಕುಟುಂಬಗಳಿಗೆ ವೈಯಕ್ತಿಕ ಹಕ್ಕುಪತ್ರ ಕೂಡಲೇ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಸೂಚಿಸಬೇಕು ಎಂದು ಗಿರಿಜನ ಕ್ರಿಯಾಕೂಟದ ಸಂಚಾಲಕ ಎಸ್. ಶ್ರೀಕಾಂತ್ ಆಗ್ರಹಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ನಿಗದಿಪಡಿಸಿರುವ 25 ಕೋಟಿ ರು.ಅನ್ನು ಸಾಮೂಹಿಕ ಅರಣ್ಯ ಭೂಮಿ ಅಭಿವೃದ್ಧಿ ಯೋಜನೆ ರೂಪಿಸಲು ಬಳಸಬೇಕು. ಅಲ್ಲದೇ ಕಳೆದ 3 ವರ್ಷಗಳಿಂದಲೂ ಕಾಕನಕೋಟೆ ಅರಣ್ಯ ಪ್ರದೇಶದ ಹಾಡಿಗಳಿಗೆ ಶಾಲೆ ಮನೆ ಕಟ್ಟಲು ಮಂಜೂರಾಗಿರುವ ಹಣ ಹಾಗೆಯೇ ಇದೆ. ಜೀನು ಕುರುಬ ಮೂಲನಿವಾಸಿಗಳಿಗೆ ಮನೆ ಕಟ್ಟಲು ಇರುವ ಹಣ ಹಾಗೆಯೇ ಉಳಿದಿದೆ. ಉಳಿದಂತೆ ಕಿರು ಅರಣ್ಯ ಸಂಪನ್ಮೂಲ ಸಂಗ್ರಹಿಸಲು ಸ್ಮಶಾನ ಹಾಗೂ ಪೂಜಾ ಸ್ಥಳಗಳನ್ನು ಬಳಸಲು, ಕಾಡಿನಿಂದ ಗಿಡಮೂಲಿಕೆ ತರಲು ಸಾಮೂಹಿಕ ಹಾಗೂ ವೈಯಕ್ತಿಕ ಹಕ್ಕು ಪತ್ರ ನೀಡುವಂತೆ ಕೋರಿದ್ದಾರೆ.