ಕಲಿಕೆಗೆ ಕಾಲದ ಮಿತಿಯಿಲ್ಲ: ಡಾ. ಗೀತಾ ಪ್ರಸಾದ್
ಕ.ಪ್ರ. ವಾರ್ತೆ, ಮೈಸೂರು, ಆ. 7
ಕಲಿಕೆ ಎಂಬುದು ಶಾಶ್ವತವಾದ ನಿರಂತರ ಪ್ರಕ್ರಿಯೆ. ಅದಕ್ಕೆ ಕಾಲದ ಮಿತಿಯಿಲ್ಲ ಎಂದು ಕವಯಿತ್ರಿ ಡಾ. ಗೀತಾ ಮಹದೇವಪ್ರಸಾದ್ ಹೇಳಿದರು.
ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ವೇದಿಕೆಯು ಏರ್ಪಡಿಸಿದ್ದ 2013-14ನೇ ಸಾಲಿನ ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪುಸ್ತಕಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗ ಬದುಕಿನಲ್ಲಿ ಸಾರ್ಥಕತೆ ಸಿಗುತ್ತದೆ. ನಾನು ಸಹ ಪ್ರತಿಭಾವಂತ ವಿದ್ಯಾರ್ಥಿನಿ ಆಗಿರಲಿಲ್ಲ. ಆದರೆ ನನಗಿದ್ದ ವಾಕ್ಚಾತುರ್ಯದಿಂದ ಈ ಹಂತಕ್ಕೆ ಬಂದಿದ್ದೇನೆ. ಕಲಿಯುವ ಬಯಕೆ ಮತ್ತು ಉತ್ಸಾಹ ವಿದ್ಯಾರ್ಥಿಗಳಿಗೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್.ಪಿ. ಪದಕಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಪಿ. ರಾಜೇಶ್ವರಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಿ.ಎಂ. ಶೇಖರ್ ಇದ್ದರು.