ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೈಗಾರಿಕೆ ಪ್ರಗತಿಗೆ ಸೌಲಭ್ಯ ನೀಡಿ: ನಟರಾಜನ್

Rashmi Kasaragodu
Updated On : 8 Aug 2013, 12:14 pm

ಕ.ಪ್ರ.ವಾರ್ತೆ   ಮೈಸೂರು   ಆ. 7
ಮೈಸೂರಿನಲ್ಲಿ ಕೈಗಾರಿಕೆ ಅಭಿವೃದ್ಧಿಗೊಳ್ಳಲು ಸರ್ಕಾರ ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಸ್ಕಾಂ ಅಧ್ಯಕ್ಷ ಕೃಷ್ಣಕುಮಾರ್ ನಟರಾಜನ್ ಮನವಿ ಮಾಡಿದರು.
ನಗರದಲ್ಲಿ ಬುಧವಾರ ಬೆಂಗಳೂರು ಐಟಿಇ ಡಾಟ್ ಬಿಜ್, ರಾಜ್ಯ ಸರ್ಕಾರದ ಐಟಿ, ಬಿಟಿ ಮತ್ತು ಎಸ್ ಆ್ಯಂಡ್ ಟಿ ಇಲಾಖೆ ಮತ್ತು ಎಸ್ಟಿಪಿಐ ವತಿಯಿಂದ ಏರ್ಪಡಿಸಿದ್ದ ಮೈಸೂರು ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಕೇಂದ್ರವಾಗಿ ಅಸ್ತಿತ್ವಕ್ಕೆ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಮುಂದಿನ ಮೂರು ವರ್ಷದಲ್ಲಿ ಬಹುದೊಡ್ಡ ಎರಡು ಕಂಪನಿಗಳು ಮೈಸೂರಿನಲ್ಲಿ ತಮ್ಮ ಸಂಸ್ಥೆ ಆರಂಭಿಸಿದರೆ ಕೈಗಾರಿಕೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿ ಉಂಟಾಗುತ್ತದೆ. ರಾಜ್ಯದ ಆದಾಯದ ಬೊಕ್ಕಸಕ್ಕೆ ಮೈಸೂರು ಶೇ.10ರಷ್ಟು ಪಾಲು ನೀಡುತ್ತದೆ. ಆದ್ದರಿಂದ ಮೈಸೂರಿನಲ್ಲಿ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದರು.
ಬೆಂಗಳೂರು ನಂತರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮೈಸೂರು ತನ್ನದೆ ಆದ ಛಾಪು ಮೂಡಿಸಿದೆ. ಭಾರತದ ಪ್ರಮುಖ ಕೈಗಾರಿಕಾ ಪ್ರದೇಶದಲ್ಲಿ ನಂಜನಗೂಡು ಸಹ ಒಂದಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಕರ್ನಾಟಕದ ಪಾಲು ಹೆಚ್ಚಾಗಬೇಕಿದ್ದರೆ ಮೈಸೂರಿನಲ್ಲಿ ಕೈಗಾರಿಕೆಗೆ ಹೆಚ್ಚು ಉತ್ತೇಜನ ದೊರಕುವಂತೆ ಆಗಬೇಕು. ಇದಕ್ಕೆ ಪೂರಕವಾಗಿ ನಮ್ಮ ಸಂಸ್ಥೆಯೂ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಮಾತನಾಡಿ, ಕೈಗಾರಿಕೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಪ್ರಮುಖವಾಗಿ ಬೆಂಗಳೂರು ಹೊರತುಪಡಿಸಿ ಮೈಸೂರಿನಂತ ದೊಡ್ಡ ನಗರಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ನೀತಿ, ಆ್ಯನಿಮೇಷನ್ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಸಿ. ಶಿಖಾ ಮಾತನಾಡಿ, ಮೈಸೂರಿನಲ್ಲಿ ಹೆಚ್ಚು ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗುತ್ತಿದೆ. ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಸದ್ಯದಲ್ಲಿಯೆ ಪೂರ್ಣಗೊಳ್ಳಲಿದೆ. ಅಲ್ಲದೆ ಮೈಸೂರು- ನಂಜನಗೂಡು ರಸ್ತೆ ವಿಸ್ತರಣಾ ಕಾರ್ಯವನ್ನೂ ಸದ್ಯದಲ್ಲಿಯೆ ಕೈಗೊಳ್ಳಲಾಗುತ್ತಿದೆ. ದಸರಾ ಸಮೀಪಿಸುತ್ತಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಈಗ ಮೈಸೂರಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಸಾಕಷ್ಟು ಅವಕಾಶ ಇದೆ ಎಂದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ, ನಂಜನಗೂಡಿನಲ್ಲಿ ಕೈಗಾರಿಕೆಗಾಗಿಯೇ ಸಾವಿರಾರು ಎಕರೆ ಭೂಮಿಯನ್ನು ಮೀಸಲಿರಿಸಲಾಗಿದೆ. ಮೈಸೂರಿನಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಈಗ ಕೈಗಾರಿಕೆ ಸ್ಥಾಪನೆಗೆ ಸೂಕ್ತ ಕಾಲ. ಇಲ್ಲಿ ಕೈಗಾರಿಕೆ ಸ್ಥಾಪಿಸುವವರಿಗೆ ನಮ್ಮ ಸಹಕಾರ ಇರುತ್ತದೆ ಎಂದರು. ಎಸ್ಟಿಪಿಐನ ನಿರ್ದೇಶಕ ಪಿ.ಕೆ. ದಾಸ್, ಎಬಿಎಐ ಅಧ್ಯಕ್ಷ ಬಿರೇನ್ ಘೋಷ್, ಐಇಎಸ್ಎ ಅಧ್ಯಕ್ಷ ಪಿ.ವಿ.ಜಿ. ಮೆನನ್, ಸಿಐಐ ಅಧ್ಯಕ್ಷ ನಾಗರಾಜನ್ ಶ್ರೀನಿವಾಸನ್ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement