ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡಿ: ಪ್ರಿಯಾ
ಕ.ಪ್ರ.ವಾರ್ತೆ ಹುಣಸೂರು ಆ. 7
ಪಟ್ಟಣದ ಬೈಪಾಸ್ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ವಾಣಿಜ್ಯ ಮಳಿಗೆಗಳ ಮಾಲೀಕರು ಕೂಡಲೇ ಸ್ವಯಂಪ್ರೇರಿತರಾಗಿ ತೆರವುಗೊಳಿಸಬೇಕು. ತಪ್ಪಿದರೆ ಕಾರ್ಯಾಚರಣೆ ನಡೆಸಿ ತೆರವಿಗೆ ಮುಂದಾಗಬೇಕಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ವಿನೂತ ಪ್ರಿಯಾ ಎಚ್ಚರಿಕೆ ನೀಡಿದರು.
ರಸ್ತೆ ಒತ್ತುವರಿ ಮಾಡಿರುವ ಮಾಲೀಕರು ಮತ್ತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೈಪಾಸ್ ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ಮಾಲೀಕರು ತಾವಾಗಿಯೇ ತೆರವುಗೊಳಿಸಬೇಕು. ತಪ್ಪಿದರೆ ನಾವೆ ತೆರವುಗೊಳಿಸಬೇಕಾಗುತ್ತದೆ ಎಂದರು.
ಪಟ್ಟಣದಲ್ಲಿನ ಮೈಸೂರು- ಮಂಗಳೂರು, ವಿರಾಜಪೇಟೆ, ಅಂತಾರಾಜ್ಯಕ್ಕೆ ತೆರಳುವ ಮುಖ್ಯ ರಸ್ತೆ ಒತ್ತುವರಿಯಾಗಿ ಅಪಘಾತ ಸಂಭವಿಸುತ್ತಿರುವ ಬಗ್ಗೆ ಮಾಹಿತಿ ಇದೆ.
ಈ ಸಂಬಂಧ ಕಂದಾಯ, ಪೊಲೀಸ್, ಪುರಸಭೆ ಮತ್ತು ಲೋಕಪಯೋಗಿ ಇಲಾಖೆಗಳು ಜಂಟಿಯಾಗಿ ಮಾಲೀಕರ ಗಮನಕ್ಕೆ ತಂದು ರಸ್ತೆ ತೆರವಿಗೆ ಮುಂದಾದಾಗ ಕೆಲವರು ಪ್ರತಿಭಟಿಸಿದರೆ, ಉಳಿದವರು ಕಾಲಾವಕಾಶ ಕೋರಿದ್ದರಿಂದ ಕಾರ್ಯಾಚರಣೆ ಮುಂದೂಡಲಾಗಿತ್ತು ಎಂದರು.
ಒತ್ತುವರಿ ತೆರವುಗೊಳಿಸಿ ಬೈಪಾಸ್ ರಸ್ತೆಯಲ್ಲಿ ಫುಟ್ಪಾತ್ ಹಾಗೂ ಸೇವಾ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಇಂಥ ಒತ್ತುವರಿ ತೆರವುಗೊಳಿಸಲಾಗುತ್ತಿದೆಯೇ ಹೊರತು ಯಾರಿಗೂ ತೊಂದರೆ ಕೊಡುವ ಉದ್ದೇಶ ಇಲ್ಲ. ಆದ್ದರಿಂದ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರಥಮ ಹಂತದಲ್ಲಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿನ ಒತ್ತುವರಿ ತೆರವಿಗೆ ಮುಂದಾಗಿದ್ದೇವೆ. ಬಳಿಕ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಓಣಿ, ರಸ್ತೆ, ಜಾಗ ಸೇರಿದಂತೆ ಹಲವು ಸರ್ಕಾರಿ ಜಾಗಗಳು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ತೆರವುಗೊಳಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಶಿವಾನಂದಮೂರ್ತಿ, ಲೋಕಪಯೋಗಿ ಇಲಾಖೆ ಎಇಇ ವಾಸುದೇವನ್ ಮತ್ತು ಅಂಗಡಿ ಮಳಿಗೆಗಳ ಮಾಲೀಕರು ಇದ್ದರು.