ಹಸೆಮಣೆ ಏರಬೇಕಿದ್ದ ಯುವತಿ ಡೆಂಘೀಗೆ ಬಲಿ!
ಟಿ. ನರಸೀಪುರ: ಮಹಾಮಾರಿ ಡೆಂಘೀ ಜ್ವರಕ್ಕೆ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಬುಧವಾರ ಯುವತಿಯೊಬ್ಬರು ಬಲಿಯಾಗಿದ್ದಾರೆ.
ಹೊರಳಹಳ್ಳಿ ಗ್ರಾಮದ ಕೇಬಲ್ ಚಂದ್ರಶೇಖರ ಎಂಬವರ ಪುತ್ರಿ ಸಿ. ಪದ್ಮಿನಿ (17) ಡೆಂಘೀ ಜ್ವರಕ್ಕೆ ಬಲಿಯಾದ ಯುವತಿ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಾಣಿಜ್ಯ ಶಾಸ್ತ್ರ) ವ್ಯಾಸಂಗ ಮಾಡುತ್ತಿದ್ದರು. ಏಳು ದಿನಗಳ ಹಿಂದೆಯೇ ಜ್ವರದ ಜೊತೆಗೆ ವಿಪರೀತ ಮೈ ಕೈ ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ನಿಯಂತ್ರಣಕ್ಕೆ ಬಾರದಿದ್ದಾಗ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕಳೆದ ಮಂಗಳವಾರ ಕರೆದೊಯ್ಯಲಾಯಿತು. ಅಲ್ಲಿಯೂ ಸೂಕ್ತ ಚಿಕಿತ್ಸೆ ದೊರೆಯದ್ದಕ್ಕೆ ಮಧ್ಯರಾತ್ರಿಯಲ್ಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಘೀ ಜ್ವರಕ್ಕೆ ಯುವತಿ ಬಲಿಯಾಗಿರುವ ಪ್ರಕರಣದ ಹಿನ್ನೆಲೆ ಹೊರಳಹಳ್ಳಿ ಗ್ರಾಮಕ್ಕೆ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ, ಕಂದಾಯಾಧಿಕಾರಿ ಮಲ್ಲೇಶ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿದರು. ತಾ. ಆರೋಗ್ಯಾಧಿಕಾರಿ ಡಾ.ಎಲ್. ಶ್ರೀನಿವಾಸ್ ಗ್ರಾಮದಲ್ಲಿನ ಸ್ವಚ್ಛತೆ ನಿರ್ವಹಣೆ ಪರಿಶೀಲಿಸಿದರು.
ಹಸಮಣೆ ಏರದೇ ಮಸಣ ಸೇರಿದಳು: ಮುಂದಿನ ಆರೇಳು ತಿಂಗಳಿನಲ್ಲಿ ಹಸಮಣೆಯನ್ನೇರಿ, ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಪದ್ಮಿನಿ ಡೆಂಘೀ ಜ್ವರಕ್ಕೆ ಬಲಿಯಾಗಿ ಹಸಮಣೆಯನ್ನೆರದೆ ಮಸಣ ಸೇರಿದ್ದಾಳೆ. ತಾಲೂಕಿನ ಹೊರಳಹಳ್ಳಿ ಗ್ರಾಮದ ಕೇಬಲ್ ಚಂದ್ರಶೇಖರ್ ಮತ್ತು ಸವಿತಾ ದಂಪತಿಯ ಜೇಷ್ಠ ಪುತ್ರಿ ಸಿ. ಪದ್ಮಿನಿ ಅವರ ವಿವಾಹ ತಲಕಾಡಿನ ವಿಜಾಪುರ ಗ್ರಾಮದ ನಿಂಗರಾಜು ಎಂಬ ಯುವಕನೊಂದಿಗೆ ನಿಶ್ಚಯವಾಗಿತ್ತು. ಹದಿನೇಳರ ಹರೆಯದಲ್ಲಿ ಯುವತಿಗೆ ಸರಿಯಾಗಿ ಹದಿನೆಂಟು ವರ್ಷ ತುಂಬಿದ ನಂತರ ವಿವಾಹ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ವಿವಾಹವಾಗುವ ಮುನ್ನವೆ ಆಕೆ ಇಹ ಲೋಕವನ್ನು ತ್ಯಜಿಸಿದ್ದಾಳೆ.