ಆಯುಕ್ತ ರಾಜಣ್ಣ ಮುಂದುವರಿಕೆಗೆ ಗ್ರಾ.ಪುನರ್ವಸತಿ ಕಾರ್ಯಕರ್ತರ ಆಗ್ರಹ
ಕ.ಪ್ರ.ವಾರ್ತೆ ಮೈಸೂರು ಆ. 8
ಅಂಗವಿಕಲರ ಅಧಿನಿಯಮ ಆಯುಕ್ತರಾಗಿ ಕೆ.ವಿ. ರಾಜಣ್ಣ ಅವರನ್ನು ಮುಂದುವರೆಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ ಕಾಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಆಗ್ರಹಿಸಿದೆ.
ಸರ್ಕಾರಿ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ ಅವರನ್ನು ಸರ್ಕಾರ ಮುಂದುವರಿಸಬೇಕು ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎಸ್. ಮಹದೇವಯ್ಯ ಕೋಟೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಕೆ.ವಿ. ರಾಜಣ್ಣ ಆಯುಕ್ತರಾಗಿ ಬಂದ ಮೇಲೆ ಶೇ. 3ರ ಅನುದಾನವನ್ನು ಅಂಗವಿಕಲರಿಗೆ ಬಳಸುವುದನ್ನು ಕಡ್ಡಾಯಗೊಳಿಸಿದರು. ಶೇ.70 ಅಂಗವಿಲಕತೆ ಇದ್ದರೂ ತರಬೇತಿ ಪಡೆಯಲು ಅವಕಾಶ ನೀಡಿದರು. ತಾಲೂಕುಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಬಗೆಹರಿಸಲು ಶ್ರಮಿಸಿದ್ದಾರೆ ಎಂದರು.
ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ: ಅಂಗವಿಕಲರಿಗೆ ಸ್ವಉದ್ಯೋಗ ಮತ್ತು ಸರ್ಕಾರಿ ಉದ್ಯೋಗ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವ ಅವರು, ಪುನರ್ವಸತಿ ಹಾಗೂ ವಿವಿದೋದ್ದೇಶ ಕಾರ್ಯಕರ್ತರಿಗೆ ಗೌರವಧನವನ್ನು ಹೆಚ್ಚಿಸುವಲ್ಲಿ ನೆರವಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅದಾಲತ್ ನಡೆಸುವ ಮೂಲಕ ಅಂಗವಿಕಲರಿಗೆ ಸ್ಪಂದಿಸಿದ್ದಾರೆ ಎಂದು ಅವರು ತಿಳಿಸಿದರು.
ಅಂಗವಿಕಲರ ಸಮಸ್ಯೆಗೆ ಸ್ಪಂದಿಸಿದ್ದಾರೆ: ರಾಜ್ಯದ ಸುಮಾರು 35 ಲಕ್ಷ ಮಂದಿ ಅಂಗವಿಕಲರ ಸಮಸ್ಯೆ ಬಗೆಹರಿಸುವಲ್ಲಿ ಕೆ.ವಿ. ರಾಜಣ್ಣ ಅವರು ಶ್ರಮಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಅವರ ಸೇವೆ ಪರಿಗಣಿಸಿ ಇದೇ ಹುದ್ದೆಯಲ್ಲಿ ಮುಂದುವರಿಸಬೇಕು.
ಸಿಎಂ ಬಳಿಗೆ ನಿಯೋಗ: ಈ ಸಂಬಂಧ ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಸಂಘದ ಅಧ್ಯಕ್ಷ ವೈ.ಎಂ. ದಿನೇಶ್ ಟಿ. ನರಸೀಪುರ, ಕಾರ್ಯದರ್ಶಿ ಸ್ವಾಮಿ ಹಾಗೂ ಸಂಘಟನಾ ಕಾರ್ಯದರ್ಶಿ ನಂಜನಗೂಡು ಬಿ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.