'ಮನೋಸ್ಥೈರ್ಯ ವೃದ್ಧಿಗೆ ಸಹ ಪಠ್ಯ ಸಹಕಾರಿ'
ಕ.ಪ್ರ.ವಾರ್ತೆ ಮೈಸೂರು ಆ. 8
ಸಹ ಪಠ್ಯ ಚಟುವಟಿಕೆಗಳು ಮನೋಸ್ಥೈರ್ಯ ನಿರ್ಮಾಣಕ್ಕೆ ಸಹಕಾರಿ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಂ. ಪುಟ್ಟು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಹಾಜನ ಪದವಿಪೂರ್ವ ಕಾಲೇಜು ವತಿಯಿಂದ ಇಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚಿನ ಒತ್ತು ನೀಡಬೇಕು: ಪಠ್ಯ ಚಟುವಟಿಕೆಗಳಂತೆ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಹೆಚ್ಚಿನ ಒತ್ತು ನೀಡಬೇಕು. ಸಹಪಠ್ಯ ಚಟುವಟಿಕೆ ಅಳವಡಿಸಿಕೊಂಡಾಗ ಮನೋಸ್ಥೈರ್ಯ ಉಂಟಾಗಲಿದೆ. ಇದರಿಂದ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿದಾರ್ಥಿಗಳು ವ್ಯಕ್ತಿತ್ವ ವಿಕಾಸಕ್ಕೂ ಗಮನಹರಿಸಬೇಕು ಎಂದರು.
ಪ್ರಾಧ್ಯಾಪಕ ಡಾ. ಕೆ.ಟಿ. ಉದಯಕಿರಣ್ ಮಾತನಾಡಿ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಲ್ಲಿ ಮನಸ್ಸು ಪರಿಪಕ್ವವಾಗಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚು ಸಾಂಸ್ಕೃತಿಕ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ಸಿ. ವೆಂಕಟೇಶ್ ಮಾತನಾಡಿ, ಎಲ್ಲಿ ಕ್ರೀಡಾಸಕ್ತಿ ಹಾಗೂ ಕ್ರೀಡಾಂಗಣ ಇರುತ್ತದೋ ಅಲ್ಲಿ ಆಸ್ಪತ್ರೆಗಳು ಹೆಚ್ಚಾಗಿ ಅಗತ್ಯ ಇರುವುದಿಲ್ಲ. ವಿದ್ಯಾರ್ಥಿಗಳು ಕ್ರೀಡಾಸಕ್ತಿಯನ್ನು ರೂಢಿಸಿಕೊಂಡು ಸ್ವಾಸ್ಥ್ಯ ಸಮಾಜಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ವಿಜಯಲಕ್ಷ್ಮೀ ಭಾಗವತ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಿ. ಕೃಷ್ಣಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕ ಪ್ರಭುದೇವ್ ನಿರೂಪಿಸಿದರು. ಸುಮಯ್ಯ ಕೌಸರ್ ವಂದಿಸಿದರು.