ಸಾಮಾಜಿಕ ಸಮಸ್ಯೆಗೆ ಶಿಕ್ಷಣವೇ ಮದ್ದು
ಕ.ಪ್ರ.ವಾರ್ತೆ ಮೈಸೂರು ಆ. 8
ಸಾಮಾಜಿಕ ಪಿಡುಗು ರಹಿತ ಸಮಾಜ ನಿರ್ಮಿಸಲು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣದಿಂದ ಸಾಧ್ಯವಿಲ್ಲ. ಬದಲಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಸಿ. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸ್ನೇಹ ಸೌರಭ-ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ದೂರ: ಇತ್ತೀಚಿನ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಡಿಮೆಯಾಗಿದೆ. ಗುರು ಮತ್ತು ಶಿಷ್ಯರ ಸಂಬಂಧ ದೂರವಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಪಿಡುಗುಗಳೂ ಹೆಚ್ಚಾಗುತ್ತಿದೆ. ಸಾಮಾಜಿಕ ಕಳಕಳಿ ನಶಿಸುತ್ತಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ಮೌಲ್ಯಯುತ ಶಿಕ್ಷಣ ನೀಡುವುದರಿಂದ ಮಾತ್ರ ಸಾಮಾಜಿಕ ಪಿಡುಗು ದೂರ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ಪಠ್ಯಕ್ಕೆ ಸೀಮಿತವಾಗಬಾರದು: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು. ಅನೇಕ ದಾರ್ಶನಿಕರ ಹಿತಚಿಂತನೆ ಮೈಗೂಡಿಸಿಕೊಳ್ಳಬೇಕು. ಸಮಾನತೆ ಪರಿಕಲ್ಪನೆಯನ್ನು ಅನೇಕ ದಾರ್ಶನಿಕರು ಹೇಳಿದ್ದಾರೆ. ಬಸವಣ್ಣ, ಬುದ್ಧ, ಅಂಬೇಡ್ಕರ್ ಸಹ ಸಮಾನತೆ ಸಾರಿ ಹೇಳಿದ್ದಾರೆ. ಸಂವಿಧಾನದಲ್ಲಿಯೂ ಸಮಾನತೆ, ಸಮಾನ ಶಿಕ್ಷಣ ಬೇಕು ಎಂಬುದು ಪ್ರಸ್ತಾಪಿಸಲಾಗಿದೆ. ಆದರೂ ಸಮಾನ ಶಿಕ್ಷಣ ದೊರಕುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಇದಕ್ಕೆ ಮೌಲ್ಯಾಧಾರಿತ ಶಿಕ್ಷಣ ದೊರಕದಿರುವುದೆ ಕಾರಣ ಎಂದು ಅವರು ಪ್ರತಿಪಾದಿಸಿದರು.
ಸಮಾಜಿಕ ಪರಿವರ್ತನೆಗೆ ಮನ ಮಾಡಿ: ಪದವಿ ಮೇಲೆ ಪದವಿ ಪಡೆದ ಕೂಡಲೆ ಜೀವನ ಮೌಲ್ಯ ಬರುವುದಿಲ್ಲ. ಶಿಕ್ಷಣದ ಉದ್ದೇಶ ಸಮಾಜಿಕ ಪರಿವರ್ತನೆ ಮಾಡಬೇಕು ಎಂಬುದು. ಆದ್ದರಿಂದ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಇಂಥ ಶಿಕ್ಷಣಗಳನ್ನು ನೀಡಲಾಗುತ್ತಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಡಾ. ಪ್ರೀತಿ ಶುಭಚಂದ್ರ ಪ್ರತಿಭಾ ಪುರಸ್ಕಾರ ನೀಡಿದರು. ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ. ಚಂದ್ರಶೇಖರಯ್ಯ, ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಪ್ರಸಾದ್ಮೂರ್ತಿ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಎಂ.ಶಾರದಾ ಮತ್ತಿತರರು ಉಪಸ್ಥಿತರಿದ್ದರು.