ಸ್ಲಂ ಬೋರ್ಡ್ ಮನೆ ಮಾರಾಟ ಖಂಡಿಸಿ ದಸಂಸ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 8
ಮೈಸೂರು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ನರ್ಮ್ ಯೋಜನೆಯ ಮನೆಗಳ ಮಾರಾಟ ಪ್ರಕರಣವನ್ನು ರಾಜ್ಯ ಸರ್ಕಾರ ಲೋಕಾಯುಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ಬೋಗಸ್ ಪಟ್ಟಿ: ಏಕಲವ್ಯನಗರ 3ನೇ ಹಂತದಲ್ಲಿ 1040 ಮನೆಗಳನ್ನು ನಿರ್ಮಿಸಲಾಗಿದ್ದು, 354 ನಿಜವಾದ ನಿರ್ಗತಿಕರನ್ನು ಆಯ್ಕೆ ಮಾಡಿ, 686 ಮನೆಗಳನ್ನು ಉಳ್ಳವರಿಂದ ಹಣ ಪಡೆದು ಬೋಗಸ್ ಪಟ್ಟಿ ತಯಾರಿಸಲಾಗಿದೆ ಎಂದು ಅವರು ಆರೋಪಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಏಕಲವ್ಯನಗರ, ಕಣ್ಣಿನ ಆಸ್ಪತ್ರೆ ಸುತ್ತಮುತ್ತ ಮನೆ ಇಲ್ಲದೆ ವಾಸಿಸುತ್ತಿರುವ 300 ನಿರ್ಗತಿಕ ಕುಟುಂಬಗಳಿಗೆ ನರ್ಮ್ ಯೋಜನೆಯ ಮನೆಗಳನ್ನು ನೀಡಬೇಕು. ನಿರ್ಗತಿಕರ ಮನೆಗಳನ್ನು ಮಾರಾಟ ಮಾಡಿ ಭ್ರಷ್ಟಾಚಾರ ಎಸಗುತ್ತಿರುವ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ದಸಂಸ ವಿಭಾಗೀಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಜಿಲ್ಲಾ ಸಂಚಾಲಕ ಎಚ್.ಬಿ. ದೀವಾಕರ್, ವೈ. ಕುಮಾರ್, ಪುಟ್ಟಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.