ಹೆಚ್ಚು ಅಂಕದಿಂದ ಉದ್ಯೋಗ ಸಿಗದು: ನಿರಂಜನ ವಾನಳ್ಳಿ
ಕ.ಪ್ರ.ವಾರ್ತೆ ಹುಣಸೂರು ಆ. 8
ಬಹುತೇಕ ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಿದರೆ, ಉದ್ಯೋಗ ಗಿಟ್ಟಿಸಬಹುದು ಎಂಬ ಭ್ರಮೆಯಲ್ಲಿರುತ್ತಾರೆ. ಆದರೆ ಪ್ರತಿ ವಿದ್ಯಾರ್ಥಿಯೂ ನಡವಳಿಕೆ, ಸಮಾಜಮುಖಿ ಕಾರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗವಕಾಶಗಳ ಸೇವಾ ಕೇಂದ್ರದ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿ.ವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗವಕಾಶಗಳ ಸೇವಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಜೀವನ ಕೌಶಲ ಯಾನ ತರಬೇತಿ ಅಂಗವಾಗಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಗೋಷ್ಠಿಯಲ್ಲಿ ಮಾತನಾಡಿದರು.
ವಿಶ್ವ ವಿದ್ಯಾನಿಲಯ ಭಾಗದಲ್ಲಿ ಈ ಬಾರಿ ಕೇಂದ್ರ ಸರ್ಕಾರದಿಂದ ರು.50 ಕೋಟಿ ಮೈಸೂರು ವಿವಿಗೆ ಬಂದಿದ್ದು, ಇದರ ಭಾಗವಾಗಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗವಕಾಶಗಳ ಸೇವಾ ಕೇಂದ್ರ ಸ್ಥಾಪಿಸಿದ್ದು, ಈ ಮೂಲಕ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲೂ ನುರಿತ ತಜ್ಞರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯಗಳು, ಐ.ಟಿ. ಕೌಶಲ್ಯಗಳು, ನಡತೆ, ಗುಂಪು ನಡವಳಿಕೆ, ಒತ್ತಡದಲ್ಲಿ ಕೆಲಸ ಮಾಡುವ ಬಗೆ, ಸಂದರ್ಶನ ಎದುರಿಸುವ ರೀತಿ ತರಬೇತಿ ಕೊಡಿಸುವ ಕಾರ್ಯ ರೂಪಿಸಲಾಗಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಟಿ.ಎನ್. ಪ್ರಭಾಕರ್ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಲೋಹಿತಾಶ್ವ, ನಿವೃತ್ತ ಪ್ರಾಧ್ಯಾಪಕ ಗೋಪಾಲ್ಸಿಂಗ್, ಉದ್ಯೋಗ ಮಾಹಿತಿ ವಿಭಾಗದ ಸಂಚಾಲಕ ಡಾ.ಮಹದೇವಸ್ವಾಮಿ, ಡಾ. ಮೋಹನ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಕಂಪನಿಯೊಂದರ ಸಿಇಒ ಎಚ್.ಎಸ್. ಬಾಲಸುಬ್ರಹ್ಮಣ್ಯ ಉಪನ್ಯಾಸ ನೀಡಿದರು.