ಕೌಟಿಲ್ಯ ವಿದ್ಯಾಲಯದಲ್ಲಿ ಆಚರಣೆ
ಮೈಸೂರು: ಭಾರತದ ಪ್ರಜೆಗಳಾಗಿರುವುದಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕೆಂದು ಫಾರೂಕಿಯಾ ಶಿಕ್ಷಣ ಸಮೂಹದ ಕಾರ್ಯದರ್ಶಿ ತಾಜ್ ಮೊಹಮ್ಮದ್ ಹೇಳಿದರು. ಕೌಟಿಲ್ಯ ವಿದ್ಯಾಲಯದಲ್ಲಿ ಶಾಂತಿ-ಸಹಬಾಳ್ವೆ ಸಂಕೇತದ ರಂಜಾನ್ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಂಜಾನ್ ಸಂದರ್ಭದಲ್ಲಿ ಕೈಗೊಳ್ಳಲಾಗುವ 30 ದಿನಗಳ ಕಠಿಣ ಉಪವಾಸ ಆಚರಣೆಯ ಕುರಿತು ತಿಳಿಸಿದರು. ವಿದ್ಯಾಲಯದ ವಿದ್ಯಾರ್ಥಿಗಳಿಂದ ರಂಜಾನ್ ಹಬ್ಬದ ಆಚರಣೆಯ ಕುರಿತು ಕಿರು ಪ್ರಹಸನ ನಡೆಯಿತು. ಪವಿತ್ರ ಖುರಾನ್ ಗ್ರಂಥದ ಪಠಣವನ್ನು ವಿದ್ಯಾರ್ಥಿಗಳು ಮಾಡಿದರು. ನಂತರ ಸಿಹಿ ವಿತರಿಸಲಾಯಿತು. ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯೋಪಾಧ್ಯಾಯಿನಿ ಮೀನಾಲ ಸತ್ಯಮೂರ್ತಿ, ಬಿ.ಬಿ. ರಾಧಿಕಾ, ನಿವೇದಿತಾ ನಾಗೇಶ್, ಶಿಕ್ಷಕರಾದ ಜಯಂತ್, ಮೊಹಮ್ಮದ್ ಹುಮಾಯುನ್, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಆಯೇಷಾ ಇಬ್ರಾಹಿಂ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸೈಮಾ ಸಹೇರ್ ಮತ್ತು ಅಬುಸುಫಿಯಾನ್ ನಿರೂಪಿಸಿ, ವಂದಿಸಿದರು.