ಕ್ಷುಲ್ಲಕ ಕಾರಣಕ್ಕೆ ಬೆಟ್ಟದಪುರದಲ್ಲಿ ಗುಂಪು ಘರ್ಷಣೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಆ. 9
ರಂಜಾನ್ ಹಬ್ಬದ ಪ್ರಾರ್ಥನೆ ನಂತರ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಘಟನೆ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಈದ್ಗಾ ಮೈದಾನದಲ್ಲಿ ರಂಜಾನ್ ಅಂಗವಾಗಿ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ನಡೆಸಿದ ಬಳಿಕ ಕ್ಷುಲ್ಲಕ ಕಾರಣಕ್ಕೆ ಘರ್ಷಣೆ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಘರ್ಷಣೆಯನ್ನು ತಹಬದಿಗೆ ತಂದಿದ್ದಾರೆ.
ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ ನಂತರ, ಸ್ಮಶಾನದಲ್ಲಿ ಹಿರಿಯರಿಗೆ ದುವ ಸಲ್ಲಿಸುವ ಅಂಗವಾಗಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದವರೆಲ್ಲ ತೆರಳಿದರು. ಈ ವೇಳೆ ಸಮುದಾಯದ ಗುರುಗಳು ದುವ ಸಲ್ಲಿಸಲು ಬಾರದೆ ಮಸೀದಿಗೆ ತೆರಳಿದ್ದಾರೆ. ಇದರಿಂದ ಬೇಸರಗೊಂಡ ಗುಂಪೊಂದು ಮಸೀದಿಗೆ ತೆರಳಿ ದುವ ಸಲ್ಲಿಸಲು ಗುರುಗಳು ಬಾರದಿರುವ ಬಗ್ಗೆ ಗುರುಗಳನ್ನು ಪ್ರಶ್ನಿಸಿದರು.
ಈ ವೇಳೆ ಮತ್ತೊಂದು ಗುಂಪು ಗುರುಗಳ ಪರ ಮಾತನಾಡಿದ್ದು, ಇದರಿಂದಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶಿಸಿ ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮುಂಜಾಗ್ರತಾ ಕ್ರಮವಾಗಿ ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್, ಎಸ್ಐ ಜಿ.ಜೆ. ಸತೀಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಹೆಚ್ಚಿನ ಭದ್ರತೆಗಾಗಿ ಡಿಆರ್ ನಿಯೋಜಿಸಿದೆ.