ಪಿಡಬ್ಲ್ಯೂಡಿ ಎಂಜಿನಿಯರ್ ಕಚೇರಿ ಮೇಲೆ ದಾಳಿ
ಹುಣಸೂರು: ಹುಣಸೂರು ಲೋಕಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಕಚೇರಿಯ ಮೇಲೆ ನಡೆದ ದಾಳಿ ವೇಳೆ ಕಾಮಗಾರಿ ಪೂರ್ಣಗೊಂಡಿದ್ದರೂ ಗುತ್ತಿಗೆದಾರರಿಗೆ ವಿತರಿಸಬೇಕಿದ್ದ 3.60 ಕೋಟಿ ರು.ನ 109 ಚೆಕ್‌ಗಳು ಶಾಖೆಯಲ್ಲೆ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿದೆ.
ಲೋಕಾಯುಕ್ತರು ಗುರುವಾರ ತಪಾಸಣೆ ಪೂರ್ಣಗೊಳಿಸಿದ್ದು ಬುಧವಾರ ಕ್ಯಾಶಿಯರ್ ಕಿರಣ್ ಮತ್ತು ಅಧೀಕ್ಷ ನಾಗರಾಜಮೂರ್ತಿ ಗೈರು ಹಾಜರಾಗಿದ್ದರಿಂದ ಅವರೆಲ್ಲರ ಲಾಕರ್‌ಗಳನ್ನು ಲಾಕ್ ಮಾಡಿ ಗುರುವಾರ ಬೆಳಗ್ಗೆ ಖುದ್ದು ಹಾಜರಿಗೆ ಸೂಚಿಸಲಾಗಿತ್ತು. ಈ ಸಂಬಂಧ ಮಾಹಿತಿ ನೀಡಿದ ಲೋಕಾಯುಕ್ತ ಸಿಪಿಐ ಮ್ಯಾಥ್ಯೂ ಥಾಮಸ್, ಸರ್ಕಾರ 2013ನೇ ಸಾಲಿಗೆ 4.60 ಕೋಟಿ ರು. ಅನುದಾನ ಬಿಡುಗಡೆ ಮಾಡಿತ್ತು. ಕಿರಣ್, ನಾಗರಾಜಮೂರ್ತಿ ಅವರ ಬೀರುಗಳನ್ನು ತಪಾಸಣೆ ನಡೆಸಿದಾಗ 3.60 ಕೋಟಿ ರು. ನ ಒಟ್ಟು 109 ಚೆಕ್ ನಗದು ಶಾಖೆಯಲ್ಲೆ ಬಾಕಿ ಉಳಿಸಿ ಕೊಂಡಿದ್ದರು.ಗುತ್ತಿಗೆದಾರರಿಗೆ ನೀಡಲು ದೊಡ್ಡ ಮೊತ್ತದ ಚೆಕ್ ದಿನಾಂಕ ನಮೂದಿಸಿ ತಮ್ಮ ಬಳಿ ಉಳಿಸಿಕೊಂಡಿದ್ದು, ಅದರಲ್ಲಿ ಆಗಸ್ಟ್ ಒಂದರ 3 ಚೆಕ್ 3ನೇ ತಾರೀಕಿನ 19 ಹಾಗೂ 5ನೇ ತಾರೀಕಿನ 4 ಚೆಕ್‌ಅನ್ನು ಲಂಚ ಕೊಡದಿದ್ದರಿಂದ ತಮ್ಮಲ್ಲಿ ಉಳಿಸಿಕೊಂಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದ್ದು ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಪೂರ್ಣಗೊಂಡ ನಂತರವಷ್ಟೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.