ಬೈಕ್ ಡಿಕ್ಕಿ; ಕಾರ್ಮಿಕ ಸಾವು
ಕ.ಪ್ರ. ವಾರ್ತೆ, ಹುಣಸೂರು, ಆ.9
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನವ ವಿವಾಹಿತ ಕಾರ್ಮಿಕನೊಬ್ಬ ದಾರುಣವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ತಾಲೂಕಿನ ಚೌಡಿಕಟ್ಟೆ ನಿವಾಸಿ ವಿಶ್ವನಾಥರಾವ್ ಕಾಟೆ ಅವರ ಪುತ್ರ ರೂಪೇಶ್ (35) ಮೃತಪಟ್ಟವರು. ಪಟ್ಟಣದ ಖಾಸಗಿ ಎಣ್ಣೆ ಗಿರಣಿ ಅಂಗಡಿಯಲ್ಲಿ ಸೇಲ್ಸ್ಮೆನ್ ಕೆಲಸ ಮಾಡುತ್ತಿದ್ದ ರೂಪೇಶ್ ತನ್ನ ಬೈಕ್ನಲ್ಲಿ ಗುರುವಾರ ರಾತ್ರಿ 8.30ರ ಸಮಯದಲ್ಲಿ ಹುಣಸೂರಿನಿಂದ ರತ್ನಪುರಿ ಮಾರ್ಗವಾಗಿ ಚೌಡಿಕಟ್ಟೆಗೆ ತೆರಳುತಿದ್ದ. ಕೊಯಮುತ್ತೂರು ಕಾಲೋನಿ ಸಮೀಪ ಎದುರಿನಿಂದ ಬರುತ್ತಿದ್ದ ಕುಡಿನೀರುಮುದ್ದನಳ್ಳಿ ನಿವಾಸಿ ಅನಿಲ್ಕುಮಾರ್ನ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ತಲೆ ಕೈಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಅಸುನೀಗಿದರು. ಅನಿಲ್ಕುಮಾರ್ ಅವರಿಗೂ ತೀವ್ರ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೂಪೇಶ್ ಕೆ.ಆರ್. ನಗರ ತಾಲೂಕಿನ ಅರೆಕಲ್ ಕೊಪ್ಪಲು ಗ್ರಾಮದ ಶೃತಿಬಾಯಿ ಎಂಬುವರನ್ನು ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.