ಮಾಜಿ ಶಾಸಕ ಪಾಪಣ್ಣರಿಂದ ಭೂ ಒತ್ತುವರಿ: ದಸಂಸ ಆರೋಪ
ಕ.ಪ್ರ.ವಾರ್ತೆ ಹುಣಸೂರು ಆ. 9
ಮಾಜಿ ಶಾಸಕ ಕೋಡಿ ವಿ. ಪಾಪಣ್ಣ ಸರ್ಕಾರಿ ಕೆರೆ, ಕಾಲುವೆ, ರಸ್ತೆಯನ್ನು ಒತ್ತುವರಿ ಮಾಡಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡಿರುವ ಬಗ್ಗೆ ಸೂಕ್ತ ದಾಖಲಾತಿಗಳಿಂದ ಸಾಬೀತಾಗಿದೆ. ಶೀಘ್ರವೇ ತಾಲೂಕು ಮತ್ತು ಜಿಲ್ಲಾಡಳಿತ ತನಿಖೆ ನಡೆಸಿ ತೆರವುಗೊಳಿಸದಿದ್ದರೆ ಬೀದಿಗಿಳಿದು ನಿರಂತರ ಚಳವಳಿ ಮತ್ತು ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ ಎಚ್ಚರಿಸಿದ್ದಾರೆ.
ರತ್ನಪುರಿ ಬಳಿಯ ಸಂತೆ ಕೆರೆಕೋಡಿಯಲ್ಲಿ ವಾಸವಿರುವ ಮಾಜಿ ಶಾಸಕರು ತಮ್ಮ ಸುತ್ತಮುತ್ತಲಿನ ಕೆರೆಕಟ್ಟೆ, ಕಾಲುವೆಗಳು, ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನೂ ಬಿಡದಂತೆ ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿದ್ದಾರೆ. ಸಣ್ಣನೀರಾವರಿ ಇಲಾಖೆಗೆ ಸೇರಿದ ಬಳೆಗಾರನ ಕಟ್ಟೆಯ ಕಾಲುವೆಯನ್ನು ಮುಚ್ಚಿಹಾಕಿ ತಮ್ಮ ಮನೆಗೆ ದಾರಿ ಮಾಡಿಕೊಂಡಿದ್ದಾರೆ. ಈಗಿರುವ ಅವರ ತೋಟ ಒಂದು ಕಾಲದಲ್ಲಿ ಕೆರೆಯಾಗಿತ್ತೆಂದು 1960ರಲ್ಲಿ ರೂಪಿಸಿರುವ ನೀಲನಕ್ಷೆ ಸಾಬೀತುಪಡಿಸುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಸ್ತೆ ಬಿಡುತ್ತಿಲ್ಲ: ಧರ್ಮಾಪುರ, ತರೀಕಲ್, ಗೌರೀಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ. ರಸ್ತೆ ನಿರ್ಮಾಣ ಹಾಗೂ ಬಸ್ ನಿಲ್ದಾಣಕ್ಕಾಗಿರುವ ಜಾಗಗಳಲ್ಲಿ ಮಳಿಗೆಗಳನ್ನು ಕಟ್ಟುತ್ತಿದ್ದಾರೆ. ಈ ಕುರಿತಂತೆ ಗ್ರಾಮಸ್ಥರು ಪ್ರಶ್ನಿಸಿದರೆ ಸುತ್ತಮುತ್ತಲ ಗ್ರಾಮಸ್ಥರ ವಿರುದ್ಧ ರಾಕ್ಷಸೀ ಪ್ರವೃತ್ತಿ ತೋರುತ್ತಿದ್ದಾರೆ. ಕಳೆದ ಗುರುವಾರ ದಸಂಸ ಹಾಗೂ ಸಂತೆಕೆರೆ ಕೋಡಿಯ ಗ್ರಾಮಸ್ಥರು ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದಾಗ ತಹಶೀಲ್ದಾರ್ ಮಾತುಕತೆ ನಡೆಸಿ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂಬಂಧ ತಾಲೂಕು ಆಡಳಿತ ಬಡವರ, ಶೋಷಿತರ ಬೆಂಬಲಕ್ಕೆ ನಿಲ್ಲಬೇಕೆಂದು ಅವರು ಒತ್ತಾಯಿಸಿದರು.
ಮೊಕದ್ದಮೆ ಹೂಡಲಿ: ಮಾಜಿ ಶಾಸಕರ ವಿರುದ್ಧ ತಾವು ಪ್ರತಿಭಟಿಸಿದ್ದರಿಂದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ. ನಿಜವಾಗಿಯೂ ಅವರಿಗೆ ಮಾನವಿದ್ದಲ್ಲಿ ತಮ್ಮಗಳ ಮೇಲೆ ಮೊಕದ್ದಮೆ ಹೂಡಲಿ. ಕಾನೂನಿಗೆ ಬೆಲೆ ನೀಡುವ ಪ್ರವೃತ್ತಿ ಅವರಲ್ಲಿದ್ದರೆ ತಾಲೂಕು ಆಡಳಿತಕ್ಕೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಲಿ ಎಂದು ಸವಾಲು ಹಾಕಿದರು.
ಹೆಚ್ಚು ವಂತಿಗೆ ಹಾವಳಿ: ರತ್ನಪುರಿಯ ಕ್ರಿಸ್ತಕೃಪಾ ಮಿಷನ್ ಕಾನ್ವೆಂಟ್ನಲ್ಲಿ ಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಂತಿಗೆ ಹಾಗೂ ಶುಲ್ಕ ವಸೂಲಿ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆ ಕೂಡಲೇ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಿ ತನಿಖೆ ನಡೆಸಬೇಕು. ಆಸ್ಪತ್ರೆಕಾವಲ್ ಹಾಗೂ ಉದ್ದೂರುಕಾವಲ್ ಗ್ರಾಮಗಳಲ್ಲಿ ಮೀಸಲಿಟ್ಟಿರುವ ಸ್ಮಶಾನಗಳ ಒತ್ತುವರಿಯಾಗಿದ್ದು, ತಾಲೂಕು ಆಡಳಿತ ತೆರವುಗೊಳಿಸುವಂತೆ ಒತ್ತಾಯಿಸಿದರು.
ದಲಿತ ಮುಖಂಡರಾದ ಕೆ.ಬಿ. ಸ್ವಾಮಿ, ಮೂರ್ತಿ, ಜಯಶೀಲಮೂರ್ತಿ ರತ್ನಪುರಿ, ರಾಜು ಚಿಕ್ಕಹುಣಸೂರು, ನಾಗರಾಜ ಶೆಟ್ಟಿ, ಡೇವಿಡ್ ಇದ್ದರು.