ರಂಜಾನ್ ಸಂಭ್ರಮ: ಮುಸ್ಲಿಮರ ಪ್ರಾರ್ಥನೆ
ಕ.ಪ್ರ.ವಾರ್ತೆ ಮೈಸೂರು ಆ. 9
ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾದ ರಂಜಾನ್ ಹಬ್ಬವನ್ನು ಶುಕ್ರವಾರ ನಗರದಲ್ಲಿ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.
ತಿಲಕ್ನಗರದ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಕಳೆದ ಒಂದು ತಿಂಗಳಿಂದ ನಡೆಸುತ್ತಿದ್ದ ಉಪವಾಸ ಅಂತ್ಯಗೊಳಿಸಿದರು.
ರಂಜಾನ್ ಅಂಗವಾಗಿ ಶುಕ್ರವಾರ ಮಕ್ಕಳಾದಿಯಾಗಿ ಎಲ್ಲರೂ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ತಿಲಕ್ನಗರ, ರಾಜೀವ್ನಗರ ಹಾಗೂ ಗೌಸಿಯಾನಗರದ ಈದ್ಗಾ ಮೈದಾನಗಳಲ್ಲಿ ಒಂದುಗೂಡಿ ಶುಭಾಶಯ ಕೋರಿದರು.
ತಿಲಕ್ನಗರದ ಈದ್ಗಾ ಮೈದಾನದಲ್ಲಿ ಮೈಸೂರಿನ ಸರ್ಖಾಜಿ ಹಜರತ್ ಮೌಲಾನಾ ಮಹಮ್ಮದ್ ಉಸ್ಮಾನ್ ಷರೀಫ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಶ್ವೇತ ವರ್ಣದ ವಸ್ತ್ರ ಧರಿಸಿದ್ದ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಚಾಮರಾಜ ಕ್ಷೇತ್ರದ ಶಾಸಕ ವಾಸು, ಮಾಜಿ ಮೇಯರ್ ಅಯೂಬ್ಖಾನ್, ಕಾಂಗ್ರೆಸ್ ಮುಖಂಡರಾದ ಕೆ.ಆರ್. ಮೋಹನ್ಕುಮಾರ್, ಎಸ್. ಚಂದ್ರಶೇಖರ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಕ್ಕಳಿಗೆ ಸಿಹಿ ವಿತರಿಸಿ ರಂಜಾನ್ ಶುಭಾಶಯ ಕೋರಿದರು.
ಬಳಿಕ ಮಾತನಾಡಿದ ಸಚಿವ ವಿ. ಶ್ರೀನಿವಾಸಪ್ರಸಾದ್, ರಂಜಾನ್ ಹಬ್ಬವು ಮಾನವೀಯತೆ ಸಂಕೇತವಾಗಿದೆ. ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಮಾನವೀಯತೆಯಿಂದ ಬದುಕು ಸಾಗಿಸುವ ಪವಿತ್ರ ಹಬ್ಬ ಇದಾಗಿದೆ. ರಂಜಾನ್ ಆಚರಣೆಯೊಂದಿಗೆ ಸಮಾಜದಲ್ಲಿ ಶಾಂತಿ ನೆಲೆಸಿ, ಪ್ರತಿಯೊಬ್ಬರು ಪರಸ್ಪರ ಬೆರೆತು ಹಬ್ಬ ಆಚರಿಸುವ ಜೊತೆಗೆ, ಎಲ್ಲರೂ ಪ್ರೀತಿ, ನೆಮ್ಮದಿಯಿಂದ ಬದುಕುವ ಚಿಂತನೆ ಬೆಳೆಸಿಕೊಳ್ಳಲಿ ಎಂದರು.
ಮಹಿಳೆಯರಿಂದಲೂ ಪ್ರಾರ್ಥನೆ: ರಂಜಾನ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಮುಸ್ಲಿಂ ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದಕ್ಕಾಗಿ ನಗರದ ಬನ್ನಿಮಂಟಪ ಬಾಲಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ 8ಕ್ಕೆ ಮುಸ್ಲಿಂ ಮಹಿಳೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ, ರಂಜಾನ್ ಹಬ್ಬ ಆಚರಿಸಿದರು.
ಪ್ರಾರ್ಥನೆಯಲ್ಲಿ ಪೊಲೀಸ್ ಆಯುಕ್ತರು ಭಾಗಿ: ತಿಲಕ್ ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಭಾಗವಹಿಸಿದ್ದರು. ಶುಕ್ರವಾರ ಬೆಳಗ್ಗೆ 10.30ರ ವೇಳೆಗೆ ಈದ್ಗಾ ಮೈದಾನಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಶುಭ ಕೋರಿದರು. ಬಳಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ರೀತಿಯ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಡವರಿಗೆ ನೆರವು: ಬಡವರಿಗೆ ನೆರವು ನೀಡುವುದು ರಂಜಾನ್ ವಿಶೇಷತೆ. ಒಂದು ತಿಂಗಳ ಕಾಲ ಉಪವಾಸದಲ್ಲಿರುವ ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಆದಾಯದ ಇಂತಿಷ್ಟು ಹಣವನ್ನು ದಾನಕ್ಕಾಗಿ ಮೀಸಲಿಟ್ಟಿರುತ್ತಾರೆ. ಅಂತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಅನೇಕರು ಈದ್ಗಾ ಮೈದಾನದ ಸುತ್ತಲೂ ಬೀಡುಬಿಟ್ಟಿದ್ದ ಬಡವರಿಗಾಗಿ ಹಣವನ್ನು ದಾನವಾಗಿ ನೀಡುವ ಮೂಲಕ ರಂಜಾನ್ ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್: ರಂಜಾನ್ ಹಿನ್ನೆಲೆ ನಗರದ ಬಹುತೇಕ ಕಡೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ತಿಲಕ್ನಗರ, ರಾಜೀವ್ನಗರ ಹಾಗೂ ಗೌಸಿಯಾನಗರದ ಈದ್ಗಾ ಮೈದಾನಗಳ ಸುತ್ತ ವಿವಿಧ ಪೊಲೀಸ್ ತುಕಡಿ ನಿಯೋಜಿಸಲಾಗಿತ್ತು. ಈದ್ಗಾ ಮೈದಾನದ ಬಳಿ 250 ಮಂದಿ ಪೊಲೀಸ್ ಸಿಬ್ಬಂದಿ, 50ಕ್ಕೂ ಹೆಚ್ಚು ಮಂದಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ನಗರ ಸಶಸ್ತ್ರ ಮೀಸಲು ಪಡೆಯ ಆರು ತುಕಡಿ, ರಾಜ್ಯ ಮೀಸಲು ಪಡೆಯ ನಾಲ್ಕು ತುಕಡಿ ಹಾಗೂ ಗೃಹ ರಕ್ಷಕ ದಳದ 150 ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಡಿಸಿಪಿಗಳಾದ ರಾಜಣ್ಣ, ಮಹದೇವಯ್ಯ ಹಾಗೂ ಪ್ರಭಾಶಂಕರ್ ಅವರು ತಲಾ ಒಂದೊಂದು ಈದ್ಗಾ ಮೈದಾನಗಳ ಭದ್ರತೆಯ ಉಸ್ತುವಾರಿ ವಹಿಸಿದ್ದರು.