ಹೃದಯವಂತಿಕೆ ತಂದುಕೊಡದ ಶಿಕ್ಷಣಕ್ಕೆ ಬೆಲೆ ಇಲ್ಲ: ಜನಾರ್ದನ್
ಕ.ಪ್ರ.ವಾರ್ತೆ ಮೈಸೂರು ಆ. 10
ಹೃದಯವಂತಿಕೆ ತಂದುಕೊಡದ ಶಿಕ್ಷಣಕ್ಕೆ ಬೆಲೆ ಇಲ್ಲ ಎಂದು ರಂಗ ನಿರ್ದೇಶಕ ಎಚ್. ಜನಾರ್ಧನ್ (ಜನ್ನಿ) ಅಭಿಪ್ರಾಯಪಟ್ಟಿದ್ದಾರೆ.
ಮರಿಮಲ್ಲಪ್ಪ ಸಂಜೆ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಸಂಜೆ ಸಿರಿ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಅಂದರೆ ಕೇವಲ ಅಕ್ಷರ ಕಲಿಸುವುದಲ್ಲ. ಶಿಕ್ಷಣ ಅಂದರೆ ಹೃದಯವಂತಿಕೆ ಕಲಿಸುವುದು ಎಂದು ಅಭಿಪ್ರಾಯಪಟ್ಟರು.
ಯುವ ಪೀಳಿಗೆಯೊಂದಿಗೆ ಸಂವಾದಿಸುವುದು ಕಲಾವಿದರ ಜವಾಬ್ದಾರಿ. ಕಲಿತು ದುಡಿಯುವವರಿಗಿಂತ ದುಡಿದು ಕಲಿಯುವವರ ಮೇಲು. ಶಿಕ್ಷಣ ಬದುಕಿಗೆ ಹತ್ತಿರವಾಗಿರಬೇಕು. ಅದು ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಬೇಕು ಎಂದು ಅವರು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಕಳೆದಿದ್ದರೂ ಇನ್ನೂ ತಾರತಮ್ಯ, ಜಾತಿಯತೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗದಿರುವುದು ದುರಂತ ಎಂದು ಅವರು ವಿಷಾದಿಸಿದರು. ಜನಪದ ಮೂಲಕಲೆ, ಅದುವೇ ಬದುಕಿನ ಸೆಲೆ ಎಂದ ಅವರು, ನಾಡಿಗೆ ಸೂಫಿಸಂತರ, ಸಂತ ಶಿಶುನಾಳ ಷರೀಫರ ಕೊಡುಗೆಯನ್ನು ಸ್ಲ್ಮರಿಸಿದರು. ಗುರಿಕಾರ್ ಮರಿಮಲ್ಲಪ್ಪ ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಹಲವು ಗೀತೆಗಳನ್ನು ತಮ್ಮ ಕಂಚಿನಕಂಠದಿಂದ ಹಾಡಿದ ಜನ್ನಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಎಂ.ಈ. ಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಾಧಿಕಾರಿ ಪ್ರೊ.ಎಸ್.ಪ್ರಫುಲ್ಲ ಚಂದ್ರಕುಮಾರ್ ಇದ್ದರು. ಪ್ರಾಂಶುಪಾಲೆ ಎಸ್.ಎಂ. ರಾಜೇಶ್ವರಿ ಸ್ವಾಗತಿಸಿದರು. ಉಪನ್ಯಾಸಕ ಜಿ. ಸಿದ್ದೇಶ್ವರಪ್ರಸಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕ ವಿ.ಪಿ. ನಾಗೇಂದ್ರಪ್ರಸಾದ್ ನಿರೂಪಿಸಿದರು. ಉಪನ್ಯಾಸಕ ಪರಮೇಶ್ವರ ಕಣ್ಣೀಮನೆ ವಂದಿಸಿದರು. ಗುರುಕಿರಣ್ ಭಟ್ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.