ಆಸ್ವಸ್ಥಗೊಂಡಿದ್ದ ಆನೆಗೆ ಚಿಕಿತ್ಸೆ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮತ್ತಿಗೋಡು ವಲಯದ ಗಣಗೂರು ಸೆಕ್ಷನ್ ಬಳಿ ಅಸ್ವಸ್ಥಗೊಂಡಿದ್ದ ಸುಮಾರು 30 ವರ್ಷದ ಹೆಣ್ಣಾನೆಗೆ ಚಿಕಿತ್ಸೆ ನೀಡಿ ಬದುಕುಳಿಸುವ ಪ್ರಯತ್ನ ಶನಿವಾರ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗಣಗೂರು ಸೆಕ್ಷನ್ನ ತಾವರೆಕೆರೆ ಜೀಪ್ ರಸ್ತೆ ಬಳಿ ತನ್ನ ಮೂರು ವರ್ಷದ ಮರಿಯೊಂದಿಗೆ ಅಸ್ವಸ್ಥಗೊಂಡಿದ್ದ 30 ವರ್ಷದ ಆನೆಯನ್ನು ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಪತ್ತೆಹಚ್ಚಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಪಶುವೈದ್ಯ ಡಾ. ಉಮಾಶಂಕರ್, ಸಾಕಾನೆಯಾದ ಗೋಪಾಲಸ್ವಾಮಿ, ರಾಜೇಂದ್ರ ನೆರವಿನಿಂದ ಮೇಲೆತ್ತಲು ಸಾಧ್ಯವಾಗದ್ದರಿಂದ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ಸ್ಪಂದಿಸುತ್ತಿರುವ ಆನೆ ಚೇತರಿಸಿಕೊಳ್ಳುತ್ತಿದೆ. ಆದರೂ ಬದುಕುಳಿಯುವ ಸ್ಥಿತಿಯಲ್ಲಿ ಇಲ್ಲ. ಸ್ಥಳಕ್ಕೆ ಎಸಿಎಫ್ ಬೆಳ್ಳಿಯಪ್ಪ, ವಲಯ ಅರಣ್ಯಾಧಿಕಾರಿ ದೇವರಾಜ್ ಭೇಟಿ ನೀಡಿದ್ದರು.