ಕೆರೆಗೆ ನೀರು ಬಿಡಲು ಒತ್ತಾಯಿಸಿ ನಾಳೆ ಬನ್ನೂರು ಬಂದ್ಗೆ ಕರೆ
ಕ.ಪ್ರ. ವಾರ್ತೆ, ಮೈಸೂರು, ಆ.10
ಬನ್ನೂರು ಹೆಗ್ಗೆರೆಗೆ ನೀರು ತುಂಬಿಸಿ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಆ.12 ರಂದು ಬನ್ನೂರು ಬಂದ್ ಮತ್ತು ರಸ್ತೆತಡೆ ಚಳವಳಿ ನಡೆಸುವುದಾಗಿ ಬನ್ನೂರು ಹೆಗ್ಗೆರೆ ನೀರು ಹೋರಾಟ ಸಮಿತಿ ತಿಳಿಸಿದೆ.
ಸುಮಾರು 900 ಎಕರೆ ವಿಸ್ತೀರ್ಣವುಳ್ಳ ಬನ್ನೂರಿನ ಹೆಗ್ಗೆರೆ ಕೆರೆ ಪುರಾತನವಾದದ್ದು. ಇದರಿಂದ 10 ಸಾವಿರ ಎಕರೆ ಅಚ್ಚುಕಟ್ಟಿಗೆ ನೀರು ದೊರಕುತ್ತದೆ.
ಈಗ ಮಳೆಯಾಗಿ ನೀರು ಪ್ರವಾಹ ರೂಪದಲ್ಲಿ ಹರಿಯುತ್ತಿದ್ದರೂ ಕೆರೆಗೆ ನೀರು ಹರಿಸಿಲ್ಲ. ಅಲ್ಲದೆ ನದಿ ಮೂಲದಿಂದ ಕೆರೆಗೆ ಸಂಪರ್ಕಿಸುವ ನಾಲೆಯಲ್ಲಿನ ಹೂಳನ್ನು ತೆಗೆಸಿಲ್ಲ. ಆದರೆ ಅಧಿಕಾರಿಗಳು ಕೆರೆಯ ಮುಂದಿನ ಭಾಗದ ನಾಲೆಯಲ್ಲಿನ ಹೂಳನ್ನು ತೆಗೆಸುತ್ತಿರುವುದು ಅವೈಜ್ಞಾನಿಕ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆರೆಗೆ ನೀರು ತುಂಬಿಸುವಂತೆ ಈ ಭಾಗದ ರೈತರು ಕೆಆರ್ಎಸ್ನ ಎಂಜಿನಿಯರ್ ಕಚೇರಿ ಎದುರು ಹೋರಾಟ ನಡೆಸಿದ್ದಾರೆ. ದಕ್ಷಿಣ ನೀರಾವರಿ ಮುಖ್ಯ ಎಂಜಿನಿಯರ್ ಮತ್ತು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಆ.12ರಂದು ಬನ್ನೂರು ಬಂದ್ ಮತ್ತು ರಸ್ತೆ ತಡೆ ಚಳವಳಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಕೆ.ಎಂ. ಪುಟ್ಟಬುದ್ಧಿ, ಆರ್. ಪುಟ್ಟಬುದ್ಧಿ, ಬನ್ನೂರು ಕೃಷ್ಣಪ್ಪ ಇದ್ದರು.