ಕೋರಿಯರ್ನಲ್ಲಿ ಕಲ್ಲು ಬಂತು!
ಕ.ಪ್ರ. ವಾರ್ತೆ, ಮೈಸೂರು, ಆ.10
ಕೋರಿಯರ್ನಲ್ಲಿ ಕಲ್ಲು ಬಂದಿರುವುದನ್ನು ಕಂಡು ವಿದೇಶಿ ವಿದ್ಯಾರ್ಥಿಯೊಬ್ಬ ದಂಗಾದ ಘಟನೆ ಶನಿವಾರ ನಡೆದಿದೆ.
ಇರಾನ್ ಮೂಲದ ಮೊಹಮ್ಮದ್ ಬಿಸ್ಮಾರ್ಕ್ ಅಡೈ ಮಾನಸಗಂಗೋತ್ರಿಯ ವಿದ್ಯಾರ್ಥಿ. ತನ್ನ ಕೆಲವು ಸ್ನೇಹಿತರೊಂದಿಗೆ ಬೋಗಾದಿ 2ನೇ ಹಂತದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದಾರೆ.
ಈತ ಆನ್ಲೈನ್ ಮೂಲಕ 3 ಟ್ಯಾಬ್ ಖರೀದಿ ಮಾಡಿದ್ದಾರೆ. ಹೀಗೆ ಖರೀದಿ ಮಾಡಿದ 3 ಟ್ಯಾಬ್ ಶನಿವಾರ ಮನೆ ವಿಳಾಸಕ್ಕೆ ಕೋರಿಯರ್ ಹುಡುಗ ತಂದುಕೊಟ್ಟಿದ್ದಾನೆ. ಮೂರು ಟ್ಯಾಬ್ಗೆ ತಗಲುವ ವೆಚ್ಚವನ್ನು ಪಾವತಿಸಿ, ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಕೋರಿಯರ್ ಹುಡುಗನ ಎದುರಲ್ಲೆ ಮೂರು ಪಾರ್ಸಲ್ ತೆಗೆದಿದ್ದು, ಎರಡರಲ್ಲಿ ಟ್ಯಾಬ್ ಇತ್ತು. ಮತ್ತೊಂದು ಪಾರ್ಸಲ್ನಲ್ಲಿ ಕಲ್ಲು ಇತ್ತು. ಇದನ್ನು ಕಂಡ ಕೋರಿಯರ್ ಹುಡುಗ ಸಹ ಕೆಲಹೊತ್ತು ಗೊಂದಲಕ್ಕೆ ಸಿಲುಕ್ಕಿದ್ದ.
ಈ ವಿಚಾರವನ್ನು ಕೋರಿಯರ್ ಹುಡುಗ ತಕ್ಷಣ ತನ್ನ ಕಂಪನಿಯವರಿಗೆ ತಿಳಿಸಿದ್ದಾನೆ. ಬಿಸ್ಮಾರ್ಕ್ ಟ್ಯಾಬ್ ಇದ್ದ ಎರಡು ಪಾರ್ಸಲ್ ತನ್ನಲ್ಲಿ ಇರಿಸಿಕೊಂಡು, ಕಲ್ಲಿದ್ದ ಮತ್ತೊಂದು ಪಾರ್ಸಲ್ ಅನ್ನು ಕೋರಿಯರ್ ಹುಡುಗನಿಗೆ ವಾಪಸ್ ನೀಡಿ, ಆ ಮೊತ್ತವನ್ನು ವಾಪಸ್ ಪಡೆದುಕೊಂಡಿದ್ದಾರೆ. ಪಾರ್ಸಲ್ ಒಳಗೆ ಕಲ್ಲು ಹೇಗೆ ಬಂತು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.