ನಗರದಲ್ಲಿ ಸಿಎಂ ಸಿದ್ದು
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ರಾತ್ರಿ ರಸ್ತೆ ಮೂಲಕ ನಗರಕ್ಕೆ ಆಗಮಿಸಿದ್ದು, ರಾಮಕೃಷ್ಣ ನಗರದಲ್ಲಿರುವ ಸ್ವಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಶಾಸಕರೊಂದಿಗೆ ಚರ್ಚಿಸಿದರು. ಭಾನುವಾರ ಸಿಟಿ ಟುಡೆ ಪತ್ರಿಕೆ ಬಿಡುಗಡೆ, ನಂಜನಗೂಡು ತಾಲೂಕು ಸುತ್ತೂರಿನಲ್ಲಿ ಮಠದ ನವೀಕೃತ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಬೆಂಗಳೂರಿಗೆ ತೆರಳುವರು.
ಕೆ.ವಿ.ರಾಜಣ್ಣ ಮುಂದುವರಿಸಲು ಆಗ್ರಹ
ಮೈಸೂರು: ಂಗವಿಕಲರ ಅಧಿನಿಯಮ ಆಯುಕ್ತರಾಗಿ ಕೆ.ವಿ. ರಾಜಣ್ಣ ಅವರನ್ನು ಮುಂದುವರೆಸುವಂತೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ವಿವಿಧೋದ್ದೇಶ ಕಾಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಒಕ್ಕೂಟ ಆಗ್ರಹಿಸಿದೆ. ಸರ್ಕಾರಿ ಸವಲತ್ತುಗಳನ್ನು ಅಂಗವಿಕಲರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ವಿ. ರಾಜಣ್ಣ ಅವರನ್ನು ಸರ್ಕಾರ ಮುಂದುವರಿಸಬೇಕು ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎಸ್. ಮಹದೇವಯ್ಯ ಕೋಟೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ
ಮೈಸೂರು: ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ವತಿಯಿಂದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ಆ. 18 ರಂದು ಏರ್ಪಡಿಸಿದೆ.
ಅಂದು ಬೆಳಗ್ಗೆ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ 8 ರಿಂದ 45 ವರ್ಷ ವಯೋವಾನದವರಿಗೆ ವಿವಿಧ ವಿಭಾಗಗಳಲ್ಲಿ ಹಾಗೂ 45 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಿ. ಧನ್ಯಕುಮಾರ್ ತಿಳಿಸಿದ್ದಾರೆ. ಮಾಹಿತಿಗೆ ಮೊ. 9945614565 ಸಂಪರ್ಕಿಸಬಹುದು.